ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದವರಿಗೆ ಗಿಫ್ಟ್ ನೀಡುವ ಪ್ರಶ್ನೆಯೇ ಇಲ್ಲ. ಯಾವುದೇ ರೀತಿಯ ಓಲೈಕೆ ರಾಜಕಾರಣವನ್ನು ಸರ್ಕಾರ ಮಾಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ನಗರದಲ್ಲಿ ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಮುಸ್ಲಿಂ ಓಲೈಕೆ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷದ ಟೀಕೆಗಳನ್ನು ತಳ್ಳಿಹಾಕಿದರು.
ಸರ್ಕಾರ ಯಾರನ್ನೂ ಓಲೈಸುವುದಿಲ್ಲ. ಅಕ್ರಮ ಒತ್ತುವರಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕೆಲವರು ಹಣ ಸಂಗ್ರಹಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳಿಕೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಅರ್ಹತೆ ಹೊಂದಿರುವವರಿಗೆ ಮಾತ್ರ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು. ಈ ಹಿಂದೆ ಕೆಲವು ಪ್ರದೇಶಗಳಲ್ಲಿ ನೀಡಲಾದ ಹಕ್ಕುಪತ್ರಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಹೊರ ರಾಜ್ಯಗಳಿಂದ ಬಂದು ಇತ್ತೀಚೆಗೆ ನೆಲೆಸಿರುವವರೂ ಇದ್ದಾರೆ. ನೈಜ ಮತದಾರರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ದಾಖಲೆಗಳ ಮೂಲಕ ಪರಿಶೀಲಿಸಿ, ಅರ್ಹರಿಗೆ ಮಾತ್ರ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದರು. ಕರ್ನಾಟಕದ ವಿಚಾರದಲ್ಲಿ ಕೇರಳದ ಹಸ್ತಕ್ಷೇಪ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ರಾಜ್ಯವನ್ನು ಸಮರ್ಥವಾಗಿ ನಡೆಸುತ್ತಿದ್ದೇವೆ. ಅವರು ಏನು ಬೇಕಾದರೂ ಹೇಳಲಿ. ಅಕ್ರಮ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಪ್ರವಾಹದ ವೇಳೆ ನೀಡಿದ ಭರವಸೆಗಳನ್ನು ಈಡೇರಿಸದವರು ನಮಗೆ ಪಾಠ ಹೇಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಕೋಗಿಲು ಲೇಔಟ್ ವಿಚಾರವಾಗಿ ಪಾಕಿಸ್ತಾನದ ವಿದೇಶಾಂಗ ಸಚಿವರು ಪ್ರತಿಕ್ರಿಯಿಸಿರುವ ಕುರಿತು ಕೇಳಿದಾಗ, ಇದಕ್ಕೆ ದೇಶದ ಹಿರಿಯ ನಾಯಕರು ಉತ್ತರಿಸುತ್ತಾರೆ. ಎರಡು ರಾಜ್ಯಗಳ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಗಳು ಸಂತ್ರಸ್ತರ ಬಳಿ ಇರುವ ಬಗ್ಗೆ ತನಗೆ ಮಾಹಿತಿ ಇಲ್ಲ. ಅಧಿಕಾರಿಗಳು ಸಂಪೂರ್ಣ ಪರಿಶೀಲನೆ ನಡೆಸಲಿದ್ದಾರೆ ಎಂದರು. ಅಕ್ರಮ ನಿವಾಸಿಗಳಿಗೆ ಮನೆ ನೀಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಮಾತನಾಡಿದ ಅವರು, ಯಾವುದೇ ಸಕ್ರಮೀಕರಣ ನಡೆಯುತ್ತಿಲ್ಲ. ಸ್ಥಳೀಯ ಮತದಾರರ ಪಟ್ಟಿಯಲ್ಲಿ ಹೆಸರು, ನಿಜವಾದ ಸ್ಥಳೀಯ ವಿಳಾಸ ಮತ್ತು ಅಗತ್ಯ ದಾಖಲೆಗಳಿದ್ದರೆ ಮಾತ್ರ ಮನೆ ನೀಡಲಾಗುವುದು. ಅರ್ಹರನ್ನು ಗುರುತಿಸಿ ಮಾತ್ರ ನೆರವು ನೀಡಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.ಇದನ್ನು ಓದಿ –ಹೊಸ ವರ್ಷಾಚರಣೆ: ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ
ಅಕ್ರಮ ವಸತಿ ಆರೋಪಕ್ಕೆ ತಿರುಗೇಟು
ಯಲಹಂಕದ ಕೋಗಿಲು ಬಡಾವಣೆಯಲ್ಲಿ 25 ವರ್ಷಗಳಿಂದ ವಾಸ ಎಂಬ ಆರೋಪಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿ ತಿರುಗೇಟು ನೀಡಿದೆ. ಚಿತ್ರಗಳ ಪ್ರಕಾರ 2016ರ ಹಿಂದಿನ ಅವಧಿಯಲ್ಲಿ ಆ ಪ್ರದೇಶದಲ್ಲಿ ಯಾವುದೇ ಮನೆಗಳಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ವಾಸಿಮ್ ಎಂಬ ವ್ಯಕ್ತಿ ಹಣ ವಸೂಲಿ ಮಾಡಿ ಮನೆ ಕಟ್ಟಿಸಿದ್ದಾನೆ ಎಂಬ ಆರೋಪದ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತನಿಖೆಗೆ ಭರವಸೆ ನೀಡಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮ, ಜಿಬಿಎ ಹಾಗೂ ಕಂದಾಯ ಇಲಾಖೆ ಸಂಯುಕ್ತ ಸಮೀಕ್ಷೆ ನಡೆಸಲಿದ್ದು, ದಾಖಲೆ ಮತ್ತು ಜಿಪಿಎಸ್ ಪರಿಶೀಲನೆ ಎರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ.








