ಬೆಂಗಳೂರು: ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರಿಸಿದ್ದು, ಬುಧವಾರ ಐದು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಆಡಳಿತಾತ್ಮಕ ಅಗತ್ಯ ಹಾಗೂ ಅಧಿಕಾರಿಗಳ ಮನವಿಯನ್ನು ಪರಿಗಣಿಸಿ ಈ ವರ್ಗಾವಣೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಸೂಚನೆ ಪ್ರಕಟಿಸಿದೆ.
ಈ ವರ್ಗಾವಣೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರನ್ನು ನೂತನವಾಗಿ ಸ್ಥಾಪಿಸಲಾದ ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಜೊತೆಗೆ ಅವರು ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ ಹುದ್ದೆಯ ಹೆಚ್ಚುವರಿ ಪ್ರಭಾರವನ್ನೂ ಮುಂದುವರಿಸಲಿದ್ದಾರೆ.
ಹುದ್ದೆ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಆರ್. ರಾಗಪ್ರಿಯ ಅವರನ್ನು ಕಾರ್ಮಿಕ ಇಲಾಖೆಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಈವರೆಗೆ ಕಾರ್ಮಿಕ ಇಲಾಖೆಯ ಆಯುಕ್ತರಾಗಿದ್ದ ಡಾ. ಗೋಪಾಲ ಕೃಷ್ಣ ಅವರನ್ನು ಕಾಲೇಜು ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆಯಾಗಿದ್ದ ಎನ್. ಮಂಜುಶ್ರೀ ಅವರಿಗೆ ಸದ್ಯ ಯಾವುದೇ ಹೊಸ ಹುದ್ದೆ ನೀಡಲಾಗಿಲ್ಲ.
ಪ್ರಜಾಸೇವಾ ಇಲಾಖೆ ಏನು?
ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವುದು ಹಾಗೂ ಆಡಳಿತಾತ್ಮಕ ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಜಾಸೇವಾ ಇಲಾಖೆಯನ್ನು ಹೊಸದಾಗಿ ಸ್ಥಾಪಿಸಿದೆ. ಜೂನ್ 20ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಧಾರದಂತೆ, ಜೂನ್ 24ರಂದು ಡಿಪಿಎಆರ್ ಈ ಇಲಾಖೆಯ ರಚನೆಗೆ ಅಧಿಕೃತ ಅಧಿಸೂಚನೆ ಹೊರಡಿಸಿತ್ತು.
ಹೊಸ ಇಲಾಖೆಯಲ್ಲಿ ಆಡಳಿತ ಸುಧಾರಣೆ, ಸಾರ್ವಜನಿಕ ಕುಂದುಕೊರತೆ ವಿಭಾಗ ಹಾಗೂ ಸಕಾಲ ಮಿಷನ್ ಅನ್ನು ವಿಲೀನಗೊಳಿಸಲಾಗಿದ್ದು, ಸಾರ್ವಜನಿಕ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನೀಡುವ ಉದ್ದೇಶ ಹೊಂದಿದೆ.
73 ಖಾಯಂ ಹುದ್ದೆಗಳ ಮರುಹೊಂದಾಣಿಕೆ
ಪ್ರಜಾಸೇವಾ ಇಲಾಖೆಯಲ್ಲಿ ಒಟ್ಟು 73 ಖಾಯಂ ಹುದ್ದೆಗಳನ್ನು ಮರುಹೊಂದಾಣಿಕೆ ಮೂಲಕ ಸೃಷ್ಟಿಸಲಾಗಿದೆ. ಸರ್ಕಾರದ ಕಾರ್ಯದರ್ಶಿ, ಮಿಷನ್ ನಿರ್ದೇಶಕ, ಅಪರ ಮಿಷನ್ ನಿರ್ದೇಶಕ, ಉಪ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳು ಇದರಲ್ಲಿ ಸೇರಿವೆ. ಜೊತೆಗೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರ್ಯಗಳಿಗಾಗಿ 48 ಹುದ್ದೆಗಳನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ.ಇದನ್ನು ಓದಿ –ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿತ: 7 ಕಾರ್ಮಿಕರ ದುರ್ಮರಣ
ಈ ಹೊಸ ಇಲಾಖೆಯ ಆಡಳಿತ ಜವಾಬ್ದಾರಿಯನ್ನು ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರಿಗೆ ವಹಿಸಲಾಗಿದೆ.








