ಬೆಂಗಳೂರು: ತಂದೆ–ತಾಯಿ ಬೇರ್ಪಟ್ಟ ಹಿನ್ನೆಲೆಯಲ್ಲಿ ಮನನೊಂದು 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಲೇಖನಾ (17) ಎಂದು ಗುರುತಿಸಲಾಗಿದೆ. ಲೇಖನಾ ಇತ್ತೀಚೆಗೆ 10ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದು, ಮನೆಯಲ್ಲೇ ಇದ್ದಳು. ಕುಟುಂಬದ ಒಳಗಿನ ಕಲಹದ ಕಾರಣದಿಂದ ತಂದೆ–ತಾಯಿ ಕೆಲಕಾಲದ ಹಿಂದೆ ಬೇರ್ಪಟ್ಟಿದ್ದು, ತಂದೆ ಬೇರೆಡೆ ವಾಸವಿದ್ದರೆ, ಲೇಖನಾ ತಾಯಿಯೊಂದಿಗೆ ವಾಸಿಸುತ್ತಿದ್ದಳು.
ನನಗೆ ತಂದೆ–ತಾಯಿ ಇಬ್ಬರ ಪ್ರೀತಿಯೂ ಸಿಗುತ್ತಿಲ್ಲ, ನಾನು ಒಂಟಿಯಾಗಿದ್ದೇನೆ ಎಂಬ ಭಾವನೆ ಕಾಡುತ್ತಿದೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದು, ಬುಧವಾರ ರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಈ ಸಂಬಂಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








