ಮಂಡ್ಯ: ತಿಥಿ ಸಿನಿಮಾದ ಮೂಲಕ ಖ್ಯಾತಿ ಪಡೆದ ನಟ ಸೆಂಚುರಿ ಗೌಡ ಅವರು ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್ರೆಗೌಡ ಅವರು ಕಳೆದ ರಾತ್ರಿ ಕೊನೆಯುಸಿರೆಳೆದರು.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನಕೊಪ್ಪಲು ಗ್ರಾಮ ನಿವಾಸಿಯಾಗಿದ್ದ ಅವರು, ತಿಥಿ ಸಿನಿಮಾದಲ್ಲಿನ ತಮ್ಮ ವಿಶಿಷ್ಟ ಅಭಿನಯದಿಂದ “ಸೆಂಚುರಿ ಗೌಡ” ಎಂದೇ ಜನಪ್ರಿಯರಾದರು. 100 ವರ್ಷ ವಯಸ್ಸು ದಾಟಿದ್ದರೂ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬಿ, ಕನ್ನಡ ಸಿನಿಪ್ರೇಮಿಗಳ ಮನಗೆದ್ದಿದ್ದರು.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೆಂಚುರಿ ಗೌಡ ಅವರ ನಿಧನಕ್ಕೆ ಚಿತ್ರರಂಗ ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಅವರ ಸ್ವಗ್ರಾಮದಲ್ಲೇ ಅಂತ್ಯಕ್ರಿಯೆ ನಡೆಯಲಿದೆ. 2015ರಲ್ಲಿ ಬಿಡುಗಡೆಯಾದ ತಿಥಿ ಸಿನಿಮಾ ಹಲವು ಪ್ರಶಸ್ತಿಗಳನ್ನು ಪಡೆದು ಕನ್ನಡ ಚಿತ್ರರಂಗದಲ್ಲಿ ಮಹತ್ವದ ಸ್ಥಾನ ಪಡೆದಿತ್ತು.








