- ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆ ಕುರಿತು ಯಾವುದೇ ಸಮೀಕ್ಷೆಯನ್ನು ನಡೆಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಡಾ. ನಾಗರಾಜ, ಕಳೆದ ಜನವರಿ 3ರಂದು ಕೆಲವು ದಿನಪತ್ರಿಕೆಗಳಲ್ಲಿ “ರಾಜ್ಯ ಚುನಾವಣಾ ಆಯೋಗವು ಮೇ 2025ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ ಶೇ.83 ಅಥವಾ ಶೇ.85ರಷ್ಟು ಜನರು ಇವಿಎಂ ಬಳಕೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ” ಎಂಬ ರೀತಿಯ ಸುದ್ದಿಗಳು ಪ್ರಕಟವಾಗಿರುವುದು ಆಯೋಗದ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಅಧಿಕಾರವನ್ನು ಹೊಂದಿದ್ದು, ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದಂತೆ ಇವಿಎಂ ಬಳಕೆ ಕುರಿತು ಆಯೋಗ ಯಾವುದೇ ಸಮೀಕ್ಷೆ ನಡೆಸಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಇದನ್ನು ಓದಿ –ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ಇಬ್ಬರು ದುರ್ಮರಣ
ಇವಿಎಂ ಕುರಿತು ಜನರ ವಿಶ್ವಾಸದ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ಸಮೀಕ್ಷೆ ನಡೆದಿದೆ ಎಂಬ ಸುದ್ದಿ ಸಂಪೂರ್ಣವಾಗಿ ತಪ್ಪು ಮತ್ತು ಆಧಾರರಹಿತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.








