- ಫೆಬ್ರವರಿಯಿಂದ 5% ಹೆಚ್ಚಳಕ್ಕೆ ಸಿದ್ಧತೆ
ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಮ್ಮೆ ದರ ಏರಿಕೆಯ ಹೊರೆ ಬೀಳುವ ಸಾಧ್ಯತೆ ಇದೆ. ಫೆಬ್ರವರಿ ತಿಂಗಳಿಂದ ನಮ್ಮ ಮೆಟ್ರೋ ಟಿಕೆಟ್ ದರವನ್ನು 5 ಶೇಕಡಾ ಹೆಚ್ಚಿಸುವ ಬಗ್ಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಸಿದ್ಧತೆ ನಡೆಸುತ್ತಿದೆ.
ಈಗಾಗಲೇ 2025ರಲ್ಲಿ 71 ಶೇಕಡಾ ದರ ಏರಿಕೆ ಮಾಡಲಾಗಿದ್ದು, ಇದರಿಂದ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ 5 ಶೇಕಡಾ ಹೆಚ್ಚಳಕ್ಕೆ ಮುಂದಾಗಿರುವುದು ಪ್ರಯಾಣಿಕರಲ್ಲಿ ಅಸಮಾಧಾನ ಮೂಡಿಸಿದೆ.
ಶುಲ್ಕ ನಿಗದಿ ಸಮಿತಿ (FFC)ಯ ಶಿಫಾರಸಿನಂತೆ ಪ್ರತಿ ವರ್ಷ ಟಿಕೆಟ್ ದರದಲ್ಲಿ 5 ಶೇಕಡಾ ಹೆಚ್ಚಳ ಮಾಡಲು ಅವಕಾಶವಿದೆ. ಮೆಟ್ರೋ ರೈಲು ನಿರ್ವಹಣೆ ಕಾಯ್ದೆ 2002ರ ಕಲಂ 33ರ ಅಡಿಯಲ್ಲಿ ಈ ಶಿಫಾರಸುಗಳು ಕಾನೂನುಬದ್ಧವಾಗಿವೆ.
ಕಳೆದ ವರ್ಷ ನಡೆದ ಭಾರೀ ದರ ಏರಿಕೆಯ ನಂತರ ನಮ್ಮ ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಸೇವೆಗಳಲ್ಲೊಂದಾಗಿ ಪರಿಣಮಿಸಿದ್ದು, ಮತ್ತೆ ದರ ಹೆಚ್ಚಳವಾದರೆ ಸಾರ್ವಜನಿಕರ ಮೇಲೆ ಇನ್ನಷ್ಟು ಆರ್ಥಿಕ ಒತ್ತಡ ಬೀಳಲಿದೆ.








