ಮೈಸೂರು: ಇಲ್ಲಿನ ಮೈಸೂರು ವಿಮಾನ ನಿಲ್ದಾಣದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾದರು.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಇಂದು ಮಧ್ಯಾಹ್ನ 2:20ಕ್ಕೆ ರಾಹುಲ್ ಗಾಂಧಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. 2:35ಕ್ಕೆ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ಗುಡ್ಲೂರಿಗೆ ತೆರಳಿದರು. ನಂತರ ಸಂಜೆ 5:45ಕ್ಕೆ ತಮಿಳುನಾಡಿನಿಂದ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ವಾಪಸ್ಸಾಗುವ ಯೋಜನೆ ಇದ್ದು, ಸಂಜೆ 6ಕ್ಕೆ ವಿಶೇಷ ವಿಮಾನದಲ್ಲಿ ದೆಹಲಿಗೆ ಮರಳಲಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಕೇವಲ 15 ನಿಮಿಷ ಮಾತ್ರ ಇದ್ದರು. ತಮಿಳುನಾಡಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿದ್ದ ಕಾರಣ, ಅವರು ತರಾತುರಿಯಲ್ಲಿ ಹೊರಟರು. ಈ ನಡುವೆ ಸಿಎಂ ಹಾಗೂ ಡಿಸಿಎಂಗೆ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಕೇವಲ ಎರಡು ನಿಮಿಷಗಳಷ್ಟೇ ಅವಕಾಶ ಸಿಕ್ಕಿತು. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಮಾತುಕತೆ ನಡೆಯದೆ, ಉಭಯ ಕುಶಲೋಪರಿ ವಿಚಾರಕ್ಕೆ ಮಾತ್ರ ಸೀಮಿತವಾಯಿತು.
ಅಧಿಕಾರ ಹಂಚಿಕೆ ಕುರಿತು ಚರ್ಚೆಗಳು ಆರಂಭವಾದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಒಟ್ಟಾಗಿ ರಾಹುಲ್ ಗಾಂಧಿಯನ್ನು ಭೇಟಿಯಾದುದು ಇದೇ ಮೊದಲ ಬಾರಿ ಎಂಬುದು ಗಮನಾರ್ಹ. ಆದರೂ ಈ ಭೇಟಿಯಿಂದ ಯಾವುದೇ ರಾಜಕೀಯ ಸಂದೇಶ ಹೊರಬಂದಿಲ್ಲ.
ಮಂಡಕಳ್ಳಿ ಪ್ರದೇಶದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿಯನ್ನು ಸಿಎಂ ಹಾಗೂ ಡಿಸಿಎಂ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ವಿಶೇಷ ವಿಮಾನದಿಂದ ಇಳಿದು ಕೇವಲ ಎರಡು ನಿಮಿಷಗಳಲ್ಲೇ ಅವರು ತಮಿಳುನಾಡು ಪ್ರವಾಸಕ್ಕೆ ಹೆಲಿಕಾಪ್ಟರ್ ಮೂಲಕ ಹೊರಟರು.
ಈ ವೇಳೆ ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ಏಕಾಂಗಿಯಾಗಿ ಸಂಚರಿಸಿದರು. ರಾಹುಲ್ ಗಾಂಧಿಯನ್ನು ಹೆಲಿಕಾಪ್ಟರ್ ಹತ್ತಿಸಿ ಹೊರಬಂದ ಬಳಿಕ, ಸಿಎಂ ಮತ್ತು ಡಿಸಿಎಂ ಪ್ರತ್ಯೇಕ ದಾರಿಯಲ್ಲಿ ತೆರಳಿದರು. ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಡಿಸಿಎಂ ದೂರ ನಡೆದು ಕಾರು ಹತ್ತಿ ಅಲ್ಲಿಂದ ಹೊರಟರು.ಇದನ್ನು ಓದಿ –ಇರಾನ್ ಜತೆ ವ್ಯವಹಾರ ನಡೆಸುವ ದೇಶಗಳಿಗೆ ಶೇ.25 ಸುಂಕ
ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ಮೈಸೂರು ಅರಮನೆಯ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು. ಸಚಿವ ಕೆ.ಜೆ. ಜಾರ್ಜ್ ಅವರು ಆನೆಯ ಪ್ರತಿಕೃತಿಯನ್ನು ಗಿಫ್ಟ್ ಆಗಿ ನೀಡಿದರು.








