ಬೆಂಗಳೂರು, ಜನವರಿ 16: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಸಂಬಂಧಿತ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರನ್ನು ವಿಮಾನ ನಿಲ್ದಾಣದಲ್ಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇಂತಹ ಚರ್ಚೆ ವಿಮಾನ ನಿಲ್ದಾಣದಲ್ಲಿ ಬೇಡ, ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ. ಅದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದೆಹಲಿಗೆ ಬರುವಂತೆ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಇದೆ.
ರಾಹುಲ್ ಗಾಂಧಿ ಅವರ ಆಹ್ವಾನದ ಬೆನ್ನಲ್ಲೇ ಡಿಕೆ ಶಿವಕುಮಾರ್ ಸಂಕ್ರಾಂತಿ ಹಬ್ಬದ ನಡುವೆಯೇ ಇಂದು ದೆಹಲಿಗೆ ತೆರಳುತ್ತಿದ್ದಾರೆ. ಮುಂದಿನ ವಾರ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ಹೊರಡಲಿರುವ ಹಿನ್ನೆಲೆಯಲ್ಲಿ, ಅದಕ್ಕೂ ಮುನ್ನವೇ ದೆಹಲಿಯಲ್ಲಿ ಭೇಟಿ ಮಾಡಿ ಪಕ್ಷದೊಳಗಿನ ಗೊಂದಲಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶ ಹೊಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ದೆಹಲಿಗೆ ಹೋಗುತ್ತಿದ್ದೇನೆ. ಪಕ್ಷದ ಎಲ್ಲ ನಾಯಕರನ್ನು ಅಲ್ಲಿ ಭೇಟಿಯಾಗುತ್ತೇನೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವುದು ಹೊಸದೇನಲ್ಲ. ಇಂತಹ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದು ಹೇಳಿದರು. ರಾಹುಲ್ ಗಾಂಧಿ ಭೇಟಿ ಬಳಿಕ ತಮ್ಮ ಬೆಂಬಲಿಗ ಶಾಸಕರು ಸಂತೋಷ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ರಾಹುಲ್ ನಮ್ಮ ಪಕ್ಷದ ನಾಯಕರು. ಅವರ ಮುಂದೆ ನಮ್ಮ ಅಭಿಪ್ರಾಯ ಮತ್ತು ಬಯಕೆಗಳನ್ನು ತಿಳಿಸುತ್ತೇನೆ ಎಂದು ಉತ್ತರಿಸಿದರು.
ಇಂದು ಬೆಳಗ್ಗೆ 10.55ಕ್ಕೆ ಡಿಕೆ ಶಿವಕುಮಾರ್ ದೆಹಲಿಗೆ ಹೊರಡಲಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕೇರಳ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ನಾಯಕರ ಮಹತ್ವದ ಸಭೆ ನಡೆಯಲಿದೆ. ಅಸ್ಸಾಂ ಚುನಾವಣೆಗೆ ಕಾಂಗ್ರೆಸ್ ವೀಕ್ಷಕರಾಗಿರುವ ಡಿಕೆ ಶಿವಕುಮಾರ್, ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಅಸ್ಸಾಂ ಚುನಾವಣೆ ಕೇವಲ ನೆಪವಾಗಿದ್ದು, ಅಧಿಕಾರ ಹಂಚಿಕೆ ವಿಚಾರವೇ ದೆಹಲಿ ಭೇಟಿಯ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಸಂಕ್ರಾಂತಿ ದಿನ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗಮನ ಸೆಳೆದವು. ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು. ಇದಕ್ಕೂ ಮೊದಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಈ ಭೇಟಿಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ನೀಡಿದ ಸಂದೇಶಗಳನ್ನು ಪ್ರಿಯಾಂಕ್ ಖರ್ಗೆ ಅವರು ಡಿಕೆ ಶಿವಕುಮಾರ್‌ಗೆ ತಲುಪಿಸಿದ್ದಾರೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಸಂಕ್ರಾಂತಿಯ ಬಳಿಕ ನಡೆಯಬೇಕಿದ್ದ ಕಾಂಗ್ರೆಸ್‌ನ ‘ಕ್ರಾಂತಿ’ ಶಿವರಾತ್ರಿಗೆ ಮುಂದೂಡಲಾಗುತ್ತದೆಯೇ ಎಂಬ ಅನುಮಾನವೂ ಶುರುವಾಗಿದೆ. ಜನವರಿ 22ರೊಳಗೆ ಗೊಂದಲ ಬಗೆಹರಿಯದಿದ್ದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್‌ನ ಆಂತರಿಕ ಗೊಂದಲವನ್ನು ಹೆಚ್ಚಿಸಬಹುದೆಂಬ ಚರ್ಚೆ ನಡೆಯುತ್ತಿದೆ.
ಜನವರಿ 22ರಿಂದ 31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದ್ದು, ಜನವರಿ 28ರಿಂದ ಸಂಸತ್ ಬಜೆಟ್ ಅಧಿವೇಶನವೂ ಆರಂಭವಾಗಲಿದೆ. ಈ ಕಾರಣಗಳಿಂದ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ನಿರಂತರವಾಗಿ ವ್ಯಸ್ತರಾಗುವ ಸಾಧ್ಯತೆ ಇದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಕಾಂಗ್ರೆಸ್‌ನ ಆಂತರಿಕ ಬದಲಾವಣೆಗಳು ಮತ್ತೆ ಫೆಬ್ರವರಿಗೆ ಮುಂದೂಡಲ್ಪಡುವ ಸಾಧ್ಯತೆ ಇದೆ.








