ದೇವು ನಿದ್ದೆ ಇಲ್ಲದೆ ಹೊರಳಾಡುತಿದ್ದ, ಗಂಡನ ಕಡೆಗೆ ನೋಡಿ ಯಾಕೆ ನಿದ್ರೆ ಬರ್ತಿಲ್ವಾ ದೇವು ಎಂದು ಭಾನು ಕೇಳಿದಾಗ, ಉಹುಂ… ಎಂದು ಗೋಣಾಡಿಸಿದ ದೇವು!
ಯಾಕೆ ಎರಡು ದಿನಗಳಿಂದ ನೋಡ್ತಿದಿನಿ ಕೋಳಿ,ಕುರಿಗಳ ಮೈ ಬೆನ್ನು ಸವರುತ್ತ ಏನೋ ಯೋಚಿಸ್ತಾ ಕೂತಿರ್ತಿಯಾ !
ಏಕೆ ಏನು ಚಿಂತೆಯಾಗಿದೆ ನಿನಗೆ!
ನಾಡಿದ್ದು ಹಬ್ಬಕ್ಕೆ ನನ್ನ ಮನೆಯವರು ನಿನ್ನ ಕಡೆಯವರು ಎಲ್ಲರೂ ಬರ್ತಿದ್ದಾರೆ, ಇನ್ನೂ ಅಡುಗೆಗೆ ತಯಾರಿ ಮಾಡಿಕೊಳ್ಳಬೇಕು, ಸಿಹಿ ಅಡುಗೆಗೆ ಹಾಗು ಮಟನ್,ಚಿಕನ್ ಮಾಡ್ಲಿಕ್ಕೆ ದಿನಸಿ ತರಬೇಕು ಇನ್ನು ಸಮಯವಿಲ್ಲ, ಈಗ ಬೇಗ ಮಲಗಿದ್ರೆ ನಾಡಿದ್ದು ಹಬ್ಬದ ತಯಾರಿ ಮಾಡಬಹುದು!
ನೋಡು ದೇವು, ನಾನು ಮನೆ ಬೇರೆ ಕ್ಲೀನ್ ಮಾಡಬೇಕು, ನಾಳೆಯ ಕೆಲಸ ನೆನಪಿಸಿಕೊಂಡ್ರೆ ಈಗ ನನಗೂ ನಿದ್ದೆ ಹಾರಿ ಹೋಗುತ್ತೆ ಎಂದಳು ಭಾನು!
ಭಾನು…ನಾನು ನಿನ್ನ ಎಲ್ಲಾ ಕೆಲಸದಲ್ಲಿ ಕೈ ಜೋಡಿಸ್ತೀನಿ ಚಿಂತೆ ಬೇಡ!
ಆದ್ರೆ ನನ್ನ ಮನಸಿಗೆ ಒಂದು ವಿಷಯ ತುಂಬಾ ನೋವು ಕೊಡುತ್ತಿದೆ!
ಹೌದಾ!!!! ಏನು ದೇವು?
ಭಾನು ಅದನ್ನು ಹೇಗೆ ಹೇಳ್ಬೇಕು ಗೊತ್ತಿಲ್ಲ!
ಯಾಕೆ ಏನು ಚಿಂತೆ, ನೋವು ನಿನಗೆ… !!
ನನಗೂ ಹೇಳು, ಇಬ್ಬರೂ ಸೇರಿ ಪರಿಹರಿಸೋಣ!
ಹಮ್,,, ಎಂದು ಉಸಿರು ಬಿಟ್ಟು ಎದ್ದು ಕುಳಿತ
ದೇವು!
ಭಾನು,ನೋಡು ನಾವು ಆಡು,ಕುರಿ, ಕೋಳಿಗಳನ್ನು ಎಷ್ಟು ಪ್ರೀತಿಯಿಟ್ಟು ಬೆಳಸಿದ್ದೀವಿ, ನಾನು ಹೊರಗಡೆಯಿಂದ ಬಂದರೆ ಸಾಕು ಓಡಿ ಬಂದು ನನ್ನ ಕಾಲು ಮಕ್ಕಳಂತೆ ಅಪ್ಪುತ್ತವೆ !
ಹೀಗಾಗಿ ಅವುಗಳನ್ನು ಯಾಕೋ ನಮ್ಮ ಆಹಾರವನ್ನಾಗಿ ಅವುಗಳನ್ನು ಕಡಿದು ತಿನ್ನಲು ಮನಸ್ಸೇ ಬರ್ತಿಲ್ಲ ಈ ನಡುವೆ ನನಗೆ! ನೀನೂ ನನ್ನ ಒಂದೆರಡು ಬಾರಿ ಬೇರೆ ಕಡೆಗೆ ಊಟಕ್ಕೆ ಹೋದಾಗ ಕೇಳ್ದೆ ಅಲ್ವಾ!
ಹೌದು ಕೇಳಿದ್ದೇ, ಆಗ ನೀನು ನನ್ನ ಹೊಟ್ಟೆ ಸರಿಯಿಲ್ಲ ಎಂದಿದ್ದೆ ಅಲ್ವಾ!!
ಹುಂ ಹಾಗೆ ಹೇಳಿದ್ದು ಸುಳ್ಳು, ನನಗೆ ಈ ನಡುವೆ ಚಿಕನ್,ಮಟನ್ ಎಲ್ಲಾ ಪ್ರಾಣಿ ಹಿಂಸೆ ಎನ್ನುವ ಹಾಗೆ ಅನಿಸ್ತಿದೆ, ಆ ಕಾರಣಕ್ಕೆ ಬೇಡ ಅಂತ ಹೇಳದೇ ಹಾಗೆ ಹೇಳ್ದೆ ಅಷ್ಟೇ! ಈಗಲೂ ನನಗೆ ನಮ್ಮ ಮನೆಯ ಹಬ್ಬದಲ್ಲಿ ಅದೆಲ್ಲ ಬೇಡ ಅನಿಸ್ತಿದೆ!
ಈ ಮಾತು ಕೇಳಿ ಭಾನು ಧಕ್ಕನೇ ಎದ್ದು ಕುಳಿತು, ಈಗ ಹೀಗೆ ಹೇಳಿದ್ರೆ ಹೇಗೆ ದೇವು, ಮನೆಗೆ ಬೇರೆ ಅಷ್ಟು ಜನ ಬರ್ತಾರೆ, ಯಾರೂ ಚಿಕನ್,ಮಟನ್ ಇಲ್ಲದೇ ಊಟಕ್ಕೆ ಕೈ ಹಚ್ಚುವುದಿಲ್ಲ ಅದು ನಿನಗೆ ಗೊತ್ತಿಲ್ವಾ!
ನನಗೂ ಗೊತ್ತಿದೆ ಭಾನು! ಆದ್ರೆ ನನ್ನ ಮನಸ್ಸು ಆ ಮುಗ್ಧ ಪ್ರಾಣಿಗಳನ್ನು ನಮ್ಮ ಆಹಾರಕ್ಕಾಗಿ ಬಲಿ ಕೊಡಲು ಇಷ್ಟ ಆಗ್ತಿಲ್ಲ,ಒಂದು ವಾರದಿಂದ ಇದೇ ಚಿಂತೆಯಾಗಿದೆ! ಇನ್ನೂ ಮೇಲೆ ನಾವು ಆ ರೀತಿಯ ಅಡುಗೆ ಮಾಡುವುದು ಬೇಡ!
ಹಾಗಂದ್ರೆ ಹೇಗೆ ದೇವು, ಹುಟ್ಟಿದಾಗಿನಿಂದ ಹಾಗೆ ಊಟ ಮಾಡಿ ಬೆಳೆದವರು ನಾವು ಈಗ ಸಡನ್ ಆಗಿ ಬಿಟ್ಟರೆ ಕಷ್ಟ ಆಗುತ್ತದೆ, ಸರಿ ನಿಧಾನವಾಗಿ ಅಭ್ಯಾಸ ಮಾಡಿ ಕೊಳ್ಳೋಣ ನಾವಿಬ್ರೂ, ಈ ಒಂದು ಹಬ್ಬಕ್ಕೆ ಮಾತ್ರ ಒಪ್ಪಿ ಬಿಡು ಆಯ್ತಾ, ಮುಂದೆ ಹೇಗಾಗುತ್ತೋ ಹಾಗೆ ನೋಡೋಣ ಎಂದು ರಮಿಸಿದಂತೆ ಆತನ ತಲೆಯಲ್ಲಿ ಕೈಯಾಡಿಸಿದಳು!
ಇದಕ್ಕೆ, ನಾ ನಿನ್ನ ಮುಂದೆ ಹೇಳಿದ್ದಿಲ್ಲ ಬಿಡು, ನನ್ನ ಮನಸ್ಸು ನಿನಗೆ ಅರ್ಥ ಆಗ್ತಿಲ್ಲ ಎಂದನು ನೋವಿನಿಂದ ದೇವು !
ಇಬ್ಬರೂ ರಾತ್ರಿ ನಿದ್ದೆ ಇಲ್ಲದೇ ಕಳೆದರು, ಬೆಳಿಗ್ಗೆ ಎದ್ದ ತಕ್ಷಣ ಮತ್ತೇ ದೇವು ಸಾಕಿದ ಪ್ರಾಣಿಗಳ ಮುಂದೆ ಹೋಗಿ ಕುಳಿತ, ಅವುಗಳು ಬಂದು ಅವನ ತೊಡೆಯ ಮೇಲೆ ಕುಳಿತು ಕೊಳ್ಳಲು ಪ್ರಯತ್ನಿಸಿದವು! ಎಲ್ಲವನ್ನೂ ಒಂದೇ ಹಿಡಿತಕ್ಕೆ ಅಪ್ಪಿಕೊಂಡು ಮುತ್ತು ಕೊಟ್ಟ, ಕೋಳಿ ಅವನ ಹೆಗಲೇರಿತು ಪ್ರೀತಿಯಿಂದ!
ಛೇ ನಾಳೆಯೊಳಗೆ ಇವು ಯಾವುವೂ ಇರುವುದಿಲ್ಲ, ಊಟಕ್ಕೆ ಜನರು ಬೇರೆ ಜಾಸ್ತಿ, ಒಂದನ್ನೂ ಉಳಿಸಲು ಸಾಧ್ಯವಿಲ್ಲ ನನ್ನಿಂದ!
ದೇವುನ ಮನಸ್ಥಿತಿ ಭಾನುಗೆ ಗೊತ್ತಾಯಿತು! ಅವಳೂ ಎಲ್ಲ ಪ್ರಾಣಿಗಳನ್ನು ಪ್ರೀತಿಯಿಂದ ಸವರಿ ಒಳಗೆ ಬಂದು ತಲೆಯ ಮೇಲೆ ಕೈ ಹೊತ್ತು ಕುಳಿತಳು!
ಮತ್ತೇ ದೇವು ಹತ್ತಿರ ಬಂದು ನಿಂತು,
ಸರಿ ದೇವು, ಹಾಗಾದ್ರೆ ಅಂಗಡಿಯಿಂದ ತಂದು ಅಡುಗೆ ಮಾಡೋಣ ಆಯ್ತಾ, ನಿನಗೆ ಈಗ ಸಮಾಧಾನನಾ!?
ಇಲ್ಲ ಭಾನು…ಬೇಡವೇ ಬೇಡ ಎನ್ನುವ ಹಾಗಾಗಿದೆ !
ಈಗ ಏನೂ ಹೇಳಲು ತೋಚದೇ ಭಾನು ಮೌನ ವಹಿಸಿದಳು!
ದೇವು ಮೌನದಿಂದ ಕುಳಿತು ತಲೆಯನ್ನು ಗೋಡೆಗಾನಿಸಿ ಕಣ್ಣು ಮುಚ್ಚಿ ಕುಳಿತ!
ಭಾನು ಧಕ್ಕನೆದ್ಧು ಬಂದು ಅವನೆಡೆಗೆ ನೋಡಿ ಸರಿ ದೇವು ತರಕಾರಿ ಹಾಕಿ ಅದೇ ರೀತಿಯ ಬಿರ್ಯಾನಿ ಮಸಾಲಾ ಹಾಕಿ ಅಡುಗೆ ಮಾಡೋಣ!
ನೀನು ಹೋಗಿ ಹೂಕೋಸು, ಪಪ್ಪಾಯಿ ಆಲೂಗಡ್ಡೆ, ಬಾಳೆಕಾಯಿ,ಗಟ್ಟಿಯಾಗಿ ಇರುವ ಯಾವುದಾದರೂ ತರಕಾರಿ ಎಲ್ಲಾ ತೆಗೆದುಕೊಂಡು ಬಾ ಎಂದಾಗ!
ದೇವು… ಆಯ್ತು ತರ್ತನಿ ಎಂದ ಸಂಭ್ರಮದಿಂದ! ಅವನಿಗೆ ಭಾನು ಒಪ್ಪಿದ್ದೇ ಒಂದು ಖುಷಿ!
ಅವನ ಖುಷಿ ನೋಡಿ ಹೇಗಾದರೂ ಸರಿ, ದೇವು
ಮನದಂತೆ ಆಗಲಿ ನೋಡುವ ಎಂದುಕೊಂಡಳು ಭಾನು! ದೇವ್ರೇ, ಶಕ್ತಿ ಕೊಡು ನನಗೆ ಅದೇ ರುಚಿಯನ್ನು ತರಕಾರಿ ಬಳಸಿ ಮಾಡುವ ಹಾಗೆ ಎಂದು ಬೇಡಿಕೊಂಡಳು!
ರಾತ್ರಿಯಲ್ಲಾ ತರಕಾರಿ ಹೆಚ್ಚಿ ಕೊಂಡು, ಮಸಾಲೆ ಮಾಡಿಕೊಂಡು ಬೆಳಿಗ್ಗೆ ಎದ್ದು ಅಡುಗೆಯ ತಯಾರಿ ನಡೆಸಿದಳು!
ಹೇಗೋ ಕಷ್ಟಪಟ್ಟು ಯಾವುದ್ಯಾವುದೋ ಹಿಟ್ಟುಗಳನ್ನು ತರಕಾರಿಗೆ ಕಲೆಸಿ ಅದನ್ನು ಹಬೆಯಲ್ಲಿ ಬೇಯಿಸಿ ಮತ್ತೇ ಸ್ವಲ್ಪ ಎಣ್ಣೆಯಲ್ಲಿ ಕರಿದು, ಹುರಿದು ರುಬ್ಬಿದ ಮಸಾಲೆ ಹಾಕಿ ರುಚಿಯಾದ ಬಿರ್ಯಾನಿಯ ರೀತಿಯಲ್ಲಿ ಮಾಡಿ ಜೊತೆಗೆ ಗ್ರೇವಿಯನ್ನು ಮಾಡಿದಳು!
ನೋಡಿದರೆ ಉದ್ದುದ್ದ ಹೆಚ್ಚಿ ಮಾಡಿದ ಆ ದೊಡ್ಡ ಗಟ್ಟಿ ಹೋಳುಗಳು ಮಟನ್ ಆಕಾರ ಪಡೆದಂತೆ ಕಾಣುತಿದ್ದವು!
ಗಾಜರ್ ಹಲ್ವಾ, ಬೊಂಡ, ಪೂರಿ, ಅನ್ನ, ರಸಂ
ಮಾಡಿದರು ಇಬ್ಬರೂ ಸೇರಿ!
ಕುರಿ, ಕೋಳಿಗಳನ್ನು ಯಾರಿಗೂ ಕಾಣದಂತೆ ಮನೆಯಿಂದ ಸ್ವಲ್ಪ ದೂರ ಒಂದು ಕಡೆಗೆ ಮೂಲೆಗೆ ಕಟ್ಟಿ ಪ್ರೀತಿಯಿಂದ ಮೈ ಸವರಿ ಬಂದನು ದೇವು!
ಇಬ್ಬರಿಗೂ ಒಂದು ರೀತಿಯ ಹೇಳದ ಆತಂಕ ಬಂಧು, ಬಳಗದವರು ನಾವು ಮಾಡಿದ ಅಡುಗೆ ಕಂಡು ಹಿಡಿದರೆ ಏನು ಹೇಳುವುದು ಎಂದು..!
ಒಂದು ವೇಳೆ ಕಂಡು ಹಿಡಿದು ಬೇಸರ ಪಟ್ಟರೆ ಇದ್ದ ವಿಷಯವನ್ನು ಇದ್ದಂತೆ ಹೇಳಿ ಕ್ಷಮೆ ಕೇಳುವುದು ಎಂದು ನಿರ್ಧರಿಸಿದರು!
ಆಶ್ಚರ್ಯವೆಂದರೆ ಬಂದ ಜನರು ಅಡುಗೆಯ ರುಚಿ ಯಾಕೋ ವ್ಯತ್ಯಾಸವಾಗಿದೆ, ಆದರೆ ತುಂಬಾ ರುಚಿಯಾಗಿ ಕೈ ಬೆರಳು ಚೀಪುವಂತಿದೆ , ಎಂದು ಇವರ ಊಟ ಮತ್ತು ಆತಿಥ್ಯವನ್ನು ಹೊಗಳಿ, ನಮಗೂ ಹೀಗೆ ಮಾಡುವುದನ್ನು ಕಲಿಸು ಭಾನು ಎಂದಾಗ, ದೇವು ಭಾನು ಕಡೆಗೆ ತಿರುಗಿ ನಕ್ಕನು ಅಭಿಮಾನದಿಂದ, ಸಂತೋಷದಿಂದ ಹೊರಟ
ಅತಿಥಿಗಳನ್ನು ಬೀಳ್ಕೊಟ್ಟು ಒಳಗೆ ಬಂದರು!
ಏನೋ ಬೇರೇ ರುಚಿ ಇದೆ ಎಂದರೇ ಹೊರತು ಅನುಮಾನ ಪಡಲಿಲ್ಲವಲ್ಲ ಅಷ್ಟ ಸಾಕು ಎನ್ನುವ ಸಾರ್ಥಕತೆ ಇಬ್ಬರಿಗೂ! ಭಾನು ಅಡುಗೆಯಲ್ಲಿ ಆ ರೀತಿಯ ತನ್ನ ಕೈ ಚಳಕ ತೋರಿಸಿದ್ದಳು !
ಎಲ್ಲರೂ ಮನೆಗೆ ಹೋದ ತಕ್ಷಣ ದೇವು ಭಾನುವನ್ನು ಅಪ್ಪಿಕೊಂಡ ಮೌನದಿಂದ! ನೀನು ನನ್ನ ಮೇಲಿಟ್ಟಿರುವ ಪ್ರೀತಿಗೆ ನನ್ನಲ್ಲಿ ಹೇಳಲು ಪದಗಳಿಲ್ಲ ಭಾನು!
ಇಷ್ಟು ದಿನ ನಿನ್ನ ಅಡುಗೆಯನ್ನು ಮೆಚ್ಚುತಿದ್ದೆ ಇವತ್ತು ವಿಸ್ಮಯನಾದೆ ಎಂದು ಅಭಿಮಾನಪಟ್ಟು ಹೇಳಿದಾಗ ಭಾನು ಸಂತೃಪ್ತಿಯಿಂದ ನಕ್ಕಳು!
ಬೇರೆ ಕಡೆಗೆ ಬಿಟ್ಟ ಕುರಿ, ಕೋಳಿಯನ್ನು ತಂದಾಗ ಅವು ಮನೆ ತುಂಬಾ ಓಡಾಡುತ್ತಾ ಇರುವುದನ್ನು ನೋಡಿ ಇಬ್ಬರೂ ಅವುಗಳನ್ನು ಮಕ್ಕಳಂತೆ ತಬ್ಬಿ ಕೊಂಡರು! ಅವು ಇವರಿಗೆ ಕೃತಜ್ಞತೆ ಸಲ್ಲಿಸುವಂತೆ ತಮ್ಮ ತಲೆಯನ್ನು ಇವರಿಗೆ ಆನಿಸಿಕೊಂಡು ಕುಳಿತವು!

ಸ್ನೇಹಾ ಆನಂದ್








