ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್, ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗಾಯಗೊಂಡವರ ಪೈಕಿ ಬಿಹಾರ ಮೂಲದ 20 ವರ್ಷದ ಸುಹಾಸ್ ಎಂಬ ಯುವಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸುಹಾಸ್ ತನ್ನ ಸ್ನೇಹಿತರೊಂದಿಗೆ ಕಂಟೇನರ್ ವಾಹನದಲ್ಲಿ ಬಿಹಾರಕ್ಕೆ ತೆರಳುತ್ತಿದ್ದನು ಎಂದು ತಿಳಿದುಬಂದಿದೆ.
ಹೊಸ ಬೈಕ್‌ಗಳನ್ನು ಹೊತ್ತು ಹೈದರಾಬಾದ್ ಕಡೆಗೆ ಸಾಗುತ್ತಿದ್ದ ಕಂಟೇನರ್ ಲಾರಿಗೆ, ಸುಗಮ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಸ್ಲೀಪರ್ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ ಕಂಟೇನರ್ ಒಳಗೆ ಸಿಲುಕಿಕೊಂಡಿದೆ.
ಅಪಘಾತದ ವೇಳೆ ಓರ್ವ ಪ್ರಯಾಣಿಕನ ಕಾಲು ಬಸ್‌ನಲ್ಲಿ ಸಿಲುಕಿಕೊಂಡು ತೀವ್ರವಾಗಿ ನರಳಾಡುತ್ತಿರುವ ದೃಶ್ಯ ಕಂಡುಬಂದಿದೆ. ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಆಗಮಿಸಿ, ಗಂಟೆಗಟ್ಟಲೆ ಹರಸಾಹಸ ಪಟ್ಟು ಕಟಿಂಗ್ ಮಿಷನ್ ಬಳಸಿ ರಾಡುಗಳನ್ನು ಕತ್ತರಿಸಿ ಪ್ರಯಾಣಿಕರನ್ನು ರಕ್ಷಿಸಿದರು.ಇದನ್ನು ಓದಿ –ಸ್ಥಳೀಯ ಸಂಸ್ಥೆ ಚುನಾವಣೆ ಒಂದೇ ಬಾರಿಗೆ ನಡೆಸಲು ಚಿಂತನೆ: ಡಿ ಕೆ ಶಿವಕುಮಾರ್
ಘಟನೆಯ ನಂತರ ಎಸ್‌ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿದಿದೆ.








