ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವೆಂದು ಆರೋಪಿಸಲಾದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರರಾವ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ನಿನ್ನೆ ಮಧ್ಯಾಹ್ನ ಡಿಜಿಪಿ ರಾಮಚಂದ್ರ ರಾವ್ ಅವರನ್ನು 10 ದಿನಗಳ ಕಡ್ಡಾಯ ರಜೆಗೆ ಕಳುಹಿಸಲಾಗಿತ್ತು. ಆದರೆ ರಾತ್ರಿ ವೇಳೆಗೆ ಸರ್ಕಾರ ಅಮಾನತು ಆದೇಶ ನೀಡಿದ್ದು, ವಿಚಾರಣೆ ಇನ್ನೂ ಬಾಕಿಯಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ವಿವರ
ಕಚೇರಿಯೊಳಗೆ ಪೊಲೀಸ್ ಸಮವಸ್ತ್ರದಲ್ಲೇ ಮಹಿಳೆಯೊಬ್ಬರೊಂದಿಗೆ ಅಸಭ್ಯ ವರ್ತನೆ ತೋರಿಸುತ್ತಿರುವಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿವೆ. ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದ ಮತ್ತೊಂದು ಪ್ರಕರಣಕ್ಕಿಂತ ಮುಂಚಿತವಾಗಿ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಈ ನಡುವೆ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಪ್ರಕರಣದ ಹಿನ್ನೆಲೆಯಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರು ಈಗಾಗಲೇ ಚರ್ಚೆಗೆ ಬಂದಿತ್ತು. ನಟಿಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ಗೃಹ ಇಲಾಖೆ ಆದೇಶಿಸಿತ್ತು. ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಾಟದ ವೇಳೆ ಶಿಷ್ಟಾಚಾರ ದುರ್ಬಳಕೆ ಆಗಿದೆಯೇ ಮತ್ತು ಈ ವಿಷಯದಲ್ಲಿ ರಾಮಚಂದ್ರ ರಾವ್ ಅವರ ಪಾತ್ರವಿದೆಯೇ ಎಂಬುದರ ಬಗ್ಗೆ ತನಿಖೆ ಸೂಚಿಸಲಾಗಿತ್ತು.
ಇದೇ ಸಂದರ್ಭದಲ್ಲೇ ವೈರಲ್ ಆದ ವಿಡಿಯೋ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರ ಕಠಿಣ ಕ್ರಮವಾಗಿ ಅಮಾನತು ಆದೇಶ ನೀಡಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.








