ಟೆಕ್ಸಾಸ್ : ಭಾರತೀಯ ಮೂಲದ ಖ್ಯಾತ ಗಗನಯಾನಿ ಸುನಿತಾ ವಿಲಿಯಮ್ಸ್ ಅವರು ನಾಸಾದಿಂದ ನಿವೃತ್ತಿಯಾಗಿದ್ದಾರೆ. ಸುನಿತಾ ವಿಲಿಯಮ್ಸ್ ಅವರು ಡಿಸೆಂಬರ್ 27, 2025ರಂದು ನಿವೃತ್ತಿಯಾದರು ಎಂದು ನಾಸಾ ಅಧಿಕೃತವಾಗಿ ಘೋಷಿಸಿದೆ. ಅವರು ಒಟ್ಟು 27 ವರ್ಷಗಳ ಕಾಲ ನಾಸಾದ ಗಗನಯಾನಿಯಾಗಿ ಸೇವೆ ಸಲ್ಲಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸುನಿತಾ ವಿಲಿಯಮ್ಸ್ ಅವರ ಕೊಡುಗೆ ಅಸಾಧಾರಣವಾಗಿದೆ. ಅವರ ನಾಯಕತ್ವ ಮತ್ತು ಸಂಶೋಧನಾ ಕಾರ್ಯಗಳು ಚಂದ್ರ ಮತ್ತು ಮಂಗಳ ಗ್ರಹಗಳತ್ತ ಮಾನವ ಯಾನ ಕೈಗೊಳ್ಳುವ ನಾಸಾದ ಪ್ರಯತ್ನಗಳಿಗೆ ಭದ್ರ ಅಡಿಪಾಯ ಹಾಕಿವೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಮಹತ್ವದ ಪ್ರೇರಣೆಯಾಗಿದೆ ಎಂದು ನಾಸಾದ ಆಡಳಿತಾಧಿಕಾರಿ ಜೇರೆಡ್ ಐಸಾಕ್ಮನ್ ಹೇಳಿದ್ದಾರೆ. ನಾಸಾ ಹಾಗೂ ರಾಷ್ಟ್ರಕ್ಕೆ ಅವರು ನೀಡಿದ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬಾಹ್ಯಾಕಾಶದಲ್ಲಿ 608 ದಿನಗಳ ಸಾಧನೆ:
ಸುನಿತಾ ವಿಲಿಯಮ್ಸ್ ಅವರು 1998ರಲ್ಲಿ ನಾಸಾಗೆ ಗಗನಯಾನಿಯಾಗಿ ಸೇರ್ಪಡೆಗೊಂಡರು. 2006, 2022 ಮತ್ತು 2024ರಲ್ಲಿ ನಡೆದ ಮೂರು ಬಾಹ್ಯಾಕಾಶ ಮಿಷನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.
ಅವರು ಒಟ್ಟು ಒಂಬತ್ತು ಬಾರಿ ಬಾಹ್ಯಾಕಾಶ ನಡಿಗೆ (ಸ್ಪೇಸ್‌ವಾಕ್) ನಡೆಸಿದ್ದು, 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶದ ಹೊರಭಾಗದಲ್ಲಿ ಕಾರ್ಯನಿರ್ವಹಿಸಿದ ದಾಖಲೆಯಿದೆ. ಅಲ್ಲದೆ, ಬಾಹ್ಯಾಕಾಶದಲ್ಲೇ ಮ್ಯಾರಥಾನ್ ಓಡಿದ ಮೊದಲ ಗಗನಯಾನಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ಗುಜರಾತ್ ಮೂಲದ ಕುಟುಂಬ ಹಿನ್ನೆಲೆ:
ಸುನಿತಾ ವಿಲಿಯಮ್ಸ್ ಅವರ ಪೂರ್ವಜರು ಗುಜರಾತ್ ರಾಜ್ಯದ ಮೆಹಸಾನಾ ಜಿಲ್ಲೆಯ ಜುಲಾಸನ್ ಗ್ರಾಮದವರು. ಅವರ ತಂದೆ ದೀಪಕ್ ಪಾಂಡ್ಯಾ ಅವರು 1953ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಇಂಟರ್‌ಮಿಡಿಯೇಟ್ ಸೈನ್ಸ್ ಪೂರ್ಣಗೊಳಿಸಿ, ಬಳಿಕ ಅಮೆರಿಕದ ಒಹಿಯೊ ರಾಜ್ಯದ ಕ್ಲೆವ್‌ಲ್ಯಾಂಡ್‌ನಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಇಂಟರ್ನ್‌ಶಿಪ್ ಮಾಡಿದ್ದಾರೆ. ನಂತರ 1964ರಲ್ಲಿ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ಶರೀರಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
1957ರಲ್ಲಿ ಪಾಂಡ್ಯಾ ಅವರು ಸ್ಲೊವೆನಿಯಾ ಮೂಲದ ಉರ್ಸುಲಿನ್ ಬೊನ್ನಿ ಝಲೊಕಾರ್ ಅವರನ್ನು ವಿವಾಹವಾದರು. ಈ ದಂಪತಿಗೆ 1965ರಲ್ಲಿ ಸುನಿತಾ ಜನಿಸಿದರು.ಇದನ್ನು ಓದಿ –‘ಮೈಷುಗರ್’ನಲ್ಲಿ ಅಕ್ರಮ ಆರೋಪ: ತನಿಖೆಗೆ ರಾಜ್ಯ ಸರ್ಕಾರ ಸಮಿತಿ ರಚನೆ
ನಾಸಾದಲ್ಲಿ ಸುನಿತಾ ವಿಲಿಯಮ್ಸ್ ಅವರ ಸಾಧನೆಗಳು ಬಾಹ್ಯಾಕಾಶ ಅನ್ವೇಷಣೆಯ ಇತಿಹಾಸದಲ್ಲಿ ಸದಾ ನೆನಪಾಗುವಂತಿದ್ದು, ಅನೇಕ ಯುವಕರಿಗೆ ಪ್ರೇರಣೆಯಾಗಿ ಉಳಿಯಲಿದೆ.








