ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ನಿಯೋಜನೆಯ ಮೇರೆಗೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಎನ್. ತೇಜಸ್ ಕುಮಾರ್ ಅವರ ಮನೆ ಮತ್ತು ಇತರ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ₹26.65 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ತೇಜಸ್ ಕುಮಾರ್ ಅವರು ಇತ್ತೀಚೆಗೆ ಅರಣ್ಯ ಇಲಾಖೆಯ ಶಿವಮೊಗ್ಗ ವಿಭಾಗದ ಮ್ಯಾನೇಜರ್ ಹುದ್ದೆಗೆ ವರ್ಗಾವಣೆಯಾಗಿದ್ದು, ಇನ್ನೂ ಹುದ್ದೆ ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ.
ತೇಜಸ್ ಕುಮಾರ್ ಅವರು ಘೋಷಿತ ಆದಾಯಕ್ಕಿಂತ ಹೆಚ್ಚುವರಿ ಆಸ್ತಿ ಹೊಂದಿರುವ ಬಗ್ಗೆ ಬೆಂಗಳೂರು ನಗರ–1 ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನ ಆಧಾರದ ಮೇಲೆ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಗುರುವಾರ ಐದು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿದರು.ಇದನ್ನು ಓದಿ –‘ನಾನು ಮುಖ್ಯಮಂತ್ರಿ ಆಗುವುದಕ್ಕೆ ಕಾಲವೇ ಉತ್ತರ ನೀಡಲಿದೆ’ : ಡಿಸಿಎಂ ಡಿ.ಕೆ.ಶಿ
ದಾಳಿಯ ವೇಳೆ 14 ಎಕರೆ ಕೃಷಿ ಜಮೀನು, 8 ಮನೆಗಳು ಹಾಗೂ 4 ನಿವೇಶನಗಳು ಸೇರಿ ₹25.63 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಪತ್ತೆ ಮಾಡಲಾಗಿದೆ. ಜೊತೆಗೆ ₹92 ಲಕ್ಷ ಮೌಲ್ಯದ ವಾಹನಗಳೂ ಪತ್ತೆಯಾಗಿವೆ. ಆದರೆ ಅಧಿಕಾರಿಯ ಹಾಗೂ ಅವರ ಸಂಬಂಧಿಕರ ಮನೆಗಳಲ್ಲಿ ಶೋಧ ನಡೆಸಿದಾಗ ಚಿನ್ನ ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿಲ್ಲ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.








