ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಹಿನ್ನೆಲೆ, ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚನಾ ಜಾಲವನ್ನು ಸಿಐಡಿ (CID) ಭೇದಿಸಿದೆ.
ರಾಜ್ಯಾದ್ಯಂತ ಏಕಕಾಲಕ್ಕೆ 100ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ ಸಿಐಡಿ ತಂಡಗಳು, ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನು ಪತ್ತೆ ಹಚ್ಚಿವೆ.
ಫೆಬ್ರವರಿ 6ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಸಿಐಡಿ ಬಂಧಿಸಿದೆ. ತನಿಖೆಯ ವೇಳೆ ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ, ಅವುಗಳನ್ನು ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ಬಹಿರಂಗವಾಗಿದೆ.
ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು. ಖಾತೆ ವಿವರಗಳನ್ನು ನೀಡಿದ್ದ ಅನೇಕ ಅಮಾಯಕ ಜನರಿಗೆ ಈ ವಂಚನೆಯ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮ್ಯೂಲ್ ಅಕೌಂಟ್‌ಗಳ ವಿರುದ್ಧ ಸಿಐಡಿ ತಂಡ ತೀವ್ರ ನಿಗಾ ವಹಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಮ್ಯೂಲ್ ಅಕೌಂಟ್ ಎಂದರೇನು?
ವಂಚನೆ ಮತ್ತು ಇತರೆ ಸೈಬರ್ ಅಪರಾಧಗಳ ಮೂಲಕ ಪಡೆದ ಹಣವನ್ನು ಸಂಗ್ರಹಿಸಲು ಅಥವಾ ಲಾಂಡರಿಂಗ್ ಮಾಡಲು ಅಪರಾಧಿಗಳು ಬಳಸುವ ಬ್ಯಾಂಕ್ ಖಾತೆಗಳನ್ನು ಮ್ಯೂಲ್ ಅಕೌಂಟ್‌ಗಳು ಎಂದು ಕರೆಯಲಾಗುತ್ತದೆ.








