ಅಮರಾವತಿ: ತಿರುಪತಿ ಲಡ್ಡು ಪ್ರಸಾದ ತಯಾರಿಕೆ ಕುರಿತ ಕಲಬೆರಕೆ ವಿವಾದ ಮತ್ತೊಂದು ತಿರುವು ಪಡೆದಿದೆ. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಐದು ವರ್ಷಗಳ ಕಾಲ ಲಡ್ಡು ತಯಾರಿಕೆಗೆ ಬಾತ್‌ರೂಮ್ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳು ಬೆರೆತಿದ್ದ ಕಲಬೆರಕೆ ತುಪ್ಪವನ್ನು ಬಳಸಲಾಗಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.
ಕರ್ನೂಲು ಜಿಲ್ಲೆಯ ಕಲುಗೋಟಲ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಲಬೆರಕೆ ತುಪ್ಪವನ್ನು ತಿರುಪತಿಯ ಜೊತೆಗೆ ಶ್ರೀಶೈಲಂ ದೇವಸ್ಥಾನಕ್ಕೂ ಪೂರೈಸಲಾಗುತ್ತಿತ್ತು ಎಂದು ತಿಳಿಸಿದರು. ಇದಲ್ಲದೆ ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬನ್ನೂ ಬಳಸಲಾಗಿತ್ತು ಎಂಬುದನ್ನು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ ವರದಿ ಉಲ್ಲೇಖಿಸಿದೆ ಎಂದು ಹೇಳಿದರು.
ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಲಡ್ಡು ಪ್ರಸಾದಕ್ಕೆ ಬಳಸಿದ ತುಪ್ಪದಲ್ಲಿ ಸಸ್ಯಜನ್ಯ ರಾಸಾಯನಿಕಗಳ ಬದಲು ಕಡಿಮೆ ಬೆಲೆಯ ಪ್ರಾಣಿಜನ್ಯ ಕೊಬ್ಬು ಹಾಗೂ ಬಾತ್‌ರೂಮ್ ಸ್ವಚ್ಛಗೊಳಿಸುವ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗಿತ್ತು ಎಂದು ನಾಯ್ಡು ಆರೋಪಿಸಿದರು. ಈ ಮೂಲಕ ವೆಂಕಟೇಶ್ವರ ಸ್ವಾಮಿಯ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಅವರು ಕಿಡಿಕಾರಿದರು.
ಐದು ವರ್ಷಗಳ ಕಾಲ ಇದೇ ರೀತಿಯ ಕಲಬೆರಕೆ ತುಪ್ಪ ಬಳಕೆಯಾಗಿದೆ ಎಂದು ಆರೋಪಿಸಿದ ಅವರು, ದೇವಾಲಯಗಳ ಘನತೆ ಮತ್ತು ಭಕ್ತರ ನಂಬಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ವಿಷಯದಲ್ಲಿ ಅತಿಯಾಗಿ ಮಾತನಾಡಲು ಇಚ್ಛಿಸುವುದಿಲ್ಲ ಎಂದರು. ಆದರೆ ಕಲಬೆರಕೆ ಪ್ರಸಾದದಿಂದ ತಿರುಪತಿ ದೇವಾಲಯದ ಪಾವಿತ್ರ್ಯತೆಗೆ ಹಾನಿಯಾಗಿದೆ; ಅದನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಇನ್ನೊಂದೆಡೆ, ವೈಎಸ್‌ಆರ್‌ಸಿಪಿ ನಾಯಕರು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಪ್ರಾಣಿಜನ್ಯ ಕೊಬ್ಬಿನ ಕಲಬೆರಕೆ ನಡೆದಿಲ್ಲ ಎಂದು ಸಿಬಿಐ ನೇತೃತ್ವದ ಎಸ್‌ಐಟಿ ಕ್ಲೀನ್ ಚಿಟ್ ನೀಡಿದೆ ಎಂದು ವಾದಿಸಿದ್ದಾರೆ. ಆದರೆ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ವಿ. ಸುಬ್ಬಾರೆಡ್ಡಿ ಅವರು ಕಲಬೆರಕೆ ನಡೆದಿದೆ ಎಂದು ಹೇಳಿರುವುದು ವಿವಾದಕ್ಕೆ ಮತ್ತಷ್ಟು ಇಂಧನ ತುಂಬಿದೆ.ಇದನ್ನು ಓದಿ –ಮ್ಯೂಲ್ ಅಕೌಂಟ್ ಸೈಬರ್ ದಂಧೆ ಭೇದನೆ: CID ದಾಳಿ
ಈ ನಡುವೆ, ವೈಎಸ್‌ಆರ್‌ಸಿಪಿ, ಟಿಡಿಪಿ ಮತ್ತು ಮುಖ್ಯಮಂತ್ರಿ ನಾಯ್ಡು ರಾಜಕೀಯ ಲಾಭಕ್ಕಾಗಿ ಕೋಮು ಭಾವನೆಗಳನ್ನು ಕೆರಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದೆ.








