ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೇ ದೇಶದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳವಾಗಿದೆ. 14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 60 ರೂಪಾಯಿ ಏರಿಕೆ ಮಾಡಲಾಗಿದ್ದು, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ದರದಲ್ಲಿ 115 ರೂಪಾಯಿ ಹೆಚ್ಚಳವಾಗಿದೆ.
ಪರಿಷ್ಕೃತ ದರಗಳು ಶನಿವಾರದಿಂದಲೇ ಜಾರಿಗೆ ಬಂದಿದ್ದು, ದರ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್‌ಗಳು ಹಾಗೂ ಸಣ್ಣ ವಾಣಿಜ್ಯ ಸಂಸ್ಥೆಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ದರ ಏರಿಕೆಗೆ ಮೊದಲು ಬೆಂಗಳೂರಿನಲ್ಲಿ ಗೃಹ ಬಳಕೆಯ ಸಿಲಿಂಡರ್ ದರ 855.50 ರೂಪಾಯಿ ಇತ್ತು. ಈಗ ಅದು 915.50 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ದೆಹಲಿಯಲ್ಲಿ ಸಿಲಿಂಡರ್ ದರ 913 ರೂಪಾಯಿ, ಮುಂಬೈನಲ್ಲಿ 912.50 ರೂಪಾಯಿ ಹಾಗೂ ಚೆನ್ನೈನಲ್ಲಿ 928.50 ರೂಪಾಯಿಗೆ ಏರಿಕೆಯಾಗಿದೆ.
ಗಮನಾರ್ಹವಾಗಿ, 2025ರ ಏಪ್ರಿಲ್‌ನಿಂದ ದೇಶೀಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಪರಿಷ್ಕರಣೆ ಆಗಿರಲಿಲ್ಲ. ಇದೀಗ ದೀರ್ಘ ವಿರಾಮದ ನಂತರ ದರ ಏರಿಕೆ ಮಾಡಲಾಗಿದೆ.ಇದನ್ನು ಓದಿ –ಕರ್ನಾಟಕ ಬಜೆಟ್ 2026-27 : ಜಿಲ್ಲಾವಾರು ಅನುದಾನದ ವಿವರ
ಇದೇ ವೇಳೆ, ಭಾರತಕ್ಕೆ ಅಮೆರಿಕದಿಂದ ಎಲ್‌ಪಿಜಿ ಪೂರೈಕೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. 2025ರ ನವೆಂಬರ್‌ನಲ್ಲಿ ಭಾರತೀಯ ಪಿಎಸ್‌ಯು ತೈಲ ಕಂಪನಿಗಳು 2026ರ ಒಪ್ಪಂದ ವರ್ಷಕ್ಕೆ ಯುಎಸ್ ಗಲ್ಫ್ ಕರಾವಳಿಯಿಂದ ಸುಮಾರು 2.2 ಮಿಲಿಯನ್ ಟನ್ ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳಲು ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿವೆ.








