ಬೆಂಗಳೂರು: ಇರಾನ್–ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮ ದೇಶದಲ್ಲಿ ಈಗಾಗಲೇ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿ ಜನಸಾಮಾನ್ಯರಿಗೆ ಹೊರೆ ಹೆಚ್ಚಾಗಿದೆ. ಇದೀಗ ಅಡುಗೆ ಎಣ್ಣೆಯ ಬೆಲೆಯೂ ಏರಿಕೆಯಾಗಿದ್ದು, ಸಾಮಾನ್ಯ ಕುಟುಂಬಗಳಿಗೆ ಮತ್ತೊಂದು ಆರ್ಥಿಕ ಹೊರೆ ಉಂಟಾಗಿದೆ.
ಗೃಹ ಬಳಕೆಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇತ್ತೀಚೆಗೆ 60 ರೂಪಾಯಿ ಏರಿಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅಡುಗೆ ಎಣ್ಣೆಯ ಬೆಲೆಯೂ ಲೀಟರ್‌ಗೆ ಸುಮಾರು 8 ರಿಂದ 10 ರೂಪಾಯಿ ಏರಿಕೆಯಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿರುವುದೇ ದರ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಕೆಲವು ಪ್ರಮುಖ ಎಣ್ಣೆ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಸನ್‌ಫ್ಲವರ್ ಎಣ್ಣೆ 163ರಿಂದ 173 ರೂಪಾಯಿಗೆ, ಗೋಲ್ಡ್ ವಿನ್ನರ್ 161ರಿಂದ 169 ರೂಪಾಯಿಗೆ, ಫಾರ್ಚೂನ್ ಆಯಿಲ್ 152ರಿಂದ 160 ರೂಪಾಯಿಗೆ, ಫ್ರೀಡಂ ಆಯಿಲ್ 160ರಿಂದ 168 ರೂಪಾಯಿಗೆ ಹಾಗೂ ರುಚಿ ಗೋಲ್ಡ್ 120ರಿಂದ 135 ರೂಪಾಯಿಗೆ ಏರಿಕೆಯಾಗಿದೆ.
ಇದೀಗ ದೀಪದ ಎಣ್ಣೆಯ ದರವೂ ಹೆಚ್ಚಾಗಿದೆ. ಆನಂದಂ ದೀಪದ ಎಣ್ಣೆ 125ರಿಂದ 135 ರೂಪಾಯಿಗೆ, ಮುರುಗನ್ ದೀಪದ ಎಣ್ಣೆ 125ರಿಂದ 135 ರೂಪಾಯಿಗೆ ಹಾಗೂ ಆಲಯಂ ದೀಪದ ಎಣ್ಣೆ 122ರಿಂದ 132 ರೂಪಾಯಿಗೆ ಏರಿಕೆಯಾಗಿದೆ.
ಹಾವೇರಿಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಈ ಕುರಿತು ಮಾತನಾಡಿದ ಕಿರಾಣಿ ಅಂಗಡಿ ಮಾಲೀಕ ಮಹಾವೀರ್, ಒಂದು ಲೀಟರ್ ಎಣ್ಣೆಗೆ ಸುಮಾರು 10 ರೂಪಾಯಿ ಹೆಚ್ಚಾಗಿದೆ. ಯುಗಾದಿ ಹಬ್ಬದ ಸಮಯದಲ್ಲಿ ಗ್ರಾಹಕರು ವ್ಯಾಪಾರಸ್ಥರೊಂದಿಗೆ ವಾಗ್ವಾದ ನಡೆಸುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಧಾರವಾಡದಲ್ಲಿಯೂ ಅಡುಗೆ ಎಣ್ಣೆ ದರ ಏರಿಕೆಯಾಗಿದ್ದು, ದರ ಏರಿಕೆಯನ್ನು ನಿಯಂತ್ರಿಸಲು ಅಡುಗೆ ಎಣ್ಣೆಯನ್ನು ಪಡಿತರ ಅಂಗಡಿಗಳ ಮೂಲಕ ನೀಡಬೇಕು ಎಂದು ದಿನಸಿ ಅಂಗಡಿ ಮಾಲೀಕ ಜಾವಿದ್ ಅಧೋನಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ ಕಲಬುರಗಿಯಲ್ಲಿ ಅಡುಗೆ ಎಣ್ಣೆ ಪ್ಯಾಕೆಟ್‌ಗಳ ಬೆಲೆಯಲ್ಲಿ 10ರಿಂದ 12 ರೂಪಾಯಿವರೆಗೆ ಏರಿಕೆ ಕಂಡುಬಂದಿದೆ. ಯುದ್ಧ ಮುಂದುವರೆದರೆ ಪ್ರತಿ ಪ್ಯಾಕೆಟ್‌ಗೆ ಇನ್ನೂ ಸುಮಾರು 10 ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.ಇದನ್ನು ಓದಿ –ಮಾ.28ಕ್ಕೆ ವಿಶೇಷ ಸಂಪುಟ ಸಭೆ: ಒಳ ಮೀಸಲಾತಿ ಜಾರಿ ಸಾಧ್ಯತೆ
ಯಾದಗಿರಿಯಲ್ಲೂ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಪಾಮ್ ಆಯಿಲ್ ಬೆಲೆ ಸುಮಾರು 10 ರೂಪಾಯಿ ಹಾಗೂ ಸನ್‌ಫ್ಲವರ್ ಆಯಿಲ್ ಬೆಲೆ 6 ರೂಪಾಯಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಜನರು ಎರಡು ಪ್ಯಾಕೆಟ್ ಎಣ್ಣೆ ಖರೀದಿಸುವ ಬದಲು ಒಂದೇ ಪ್ಯಾಕೆಟ್‌ಗೆ ಮಿತವಾಗುತ್ತಿದ್ದಾರೆ. ಇದರಿಂದ ವ್ಯಾಪಾರಸ್ಥರಿಗೂ ತೊಂದರೆ ಉಂಟಾಗಿದೆ.








