ಮಂಡ್ಯ: ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಮಂಡ್ಯದಲ್ಲಿ ನಿರ್ಮಾಣವಾಗಲಿರುವ ₹14 ಕೋಟಿ ವೆಚ್ಚದ ಬಹುಪಯೋಗಿ ಒಳಾಂಗಣ ಕ್ರೀಡಾಂಗಣಕ್ಕೆ ಕೇಂದ್ರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹಾಗೂ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೂಮಿಪೂಜೆ ನೆರವೇರಿಸಿ ಶಂಕುಸ್ಥಾಪನೆ ಮಾಡಿದರು.
ಮಂಡ್ಯದ ವಿಸಿ ಫಾರಂನಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಖೇಲೋ ಇಂಡಿಯಾ – ವೈಬ್ರೆಂಟ್ ಮಂಡ್ಯ” ಎಂಬ ನಿನಾದದಂತೆ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಇನ್ನಷ್ಟು ಬೆಳೆಯಲಿ ಹಾಗೂ ಹೆಚ್ಚಿನ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೆ.ಆರ್.ಪೇಟೆ ಶಾಸಕ ಮಂಜುನಾಥ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮತ್ತು ಜಿಲ್ಲೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ, ಖೇಲೋ ಇಂಡಿಯಾ ಯೋಜನೆ ದೇಶದ ತಳಮಟ್ಟದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಹಾಗೂ ಭಾರತವನ್ನು ಶ್ರೇಷ್ಠ ಕ್ರೀಡಾ ರಾಷ್ಟ್ರವನ್ನಾಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಯತ್ನದಿಂದ ಮಂಡ್ಯದಲ್ಲಿ ಈ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ ಎಂದು ಅವರು ತಿಳಿಸಿದರು.
ಮಂಡ್ಯ ಜಿಲ್ಲೆಯಿಂದ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ಕ್ರೀಡಾಪಟುಗಳು ಹೊರಬಂದಿದ್ದಾರೆ. ವಿಕಾಸ್ ಗೌಡ ಹಾಗೂ ಕೆ.ಆರ್. ಶಿಲ್ಪಾ ಅವರಂತಹ ಪ್ರತಿಭೆಗಳು ಮಂಡ್ಯದ ಹೆಸರನ್ನು ದೇಶ-ವಿದೇಶಗಳಲ್ಲಿ ಮೆರೆದಿದ್ದಾರೆ. ವಿಶೇಷವಾಗಿ ವೀಲ್‌ಚೇರ್ ಟೆನಿಸ್‌ನಲ್ಲಿ ಭಾರತ ನಂ.1 ಆಟಗಾರ್ತಿಯಾಗಿರುವ ಶಿಲ್ಪಾ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.
ಕಳೆದ ಹನ್ನೊಂದು ವರ್ಷಗಳಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಇತ್ತೀಚಿನ ಬಜೆಟ್‌ನಲ್ಲಿ ₹4,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹತ್ತು ವರ್ಷಗಳ ಹಿಂದೆ ಇದಕ್ಕಾಗಿ ಕೇವಲ ₹1,200 ಕೋಟಿ ರೂ. ಮಾತ್ರ ನೀಡಲಾಗುತ್ತಿತ್ತು. ಈಗ ಅದರ ಪ್ರಮಾಣ ಮೂರೂವರೆ ಪಟ್ಟು ಹೆಚ್ಚಾಗಿದೆ ಎಂದು ಅವರು ವಿವರಿಸಿದರು.ಇದನ್ನು ಓದಿ –ಕೆರೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು
ಕಾರ್ಯಕ್ರಮದ ವೇಳೆ 388 ಮಂದಿ ವಿಶೇಷ ಚೇತನರಿಗೆ ಟಿಸಿಎಸ್ ಮತ್ತು ಭಾರತೀಯ ಉಕ್ಕು ಪ್ರಾಧಿಕಾರ (SAIL) ಸಂಸ್ಥೆಗಳ ಸಿಎಸ್‌ಆರ್ ನಿಧಿಯಿಂದ ನೀಡಲಾದ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಲಾಯಿತು. ಜೊತೆಗೆ ಇನ್ಫೋಸಿಸ್ ಕಂಪನಿಯಿಂದ ನೀಡಲಾದ 500 ಕಂಪ್ಯೂಟರ್‌ಗಳು ಹಾಗೂ 100 ಲ್ಯಾಪ್‌ಟಾಪ್‌ಗಳನ್ನು ಸರ್ಕಾರಿ ಶಾಲೆಗಳಿಗೆ ಹಸ್ತಾಂತರಿಸಲಾಯಿತು.








