ಮೈಸೂರು, ಮಾ.17: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬರು ಬಂಧನದಿಂದ ತಪ್ಪಿಸಿಕೊಳ್ಳಲು ಕೈ ಕೊಯ್ದುಕೊಂಡು ಹೈಡ್ರಾಮಾ ಮಾಡಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಮಂಜುಳಾ ಎಂಬ ಪಿಡಿಒ, ನೀರುಗಂಟಿಯಾಗಿದ್ದ ಸ್ವಾಮಿ ಅವರ ನಿಧನದ ಬಳಿಕ ಅವರ ಪುತ್ರ ಮಹದೇವ್ ಅವರಿಗೆ ಬಾಕಿ ಸಂಬಳ ಬಿಡುಗಡೆ ಮಾಡಲು 50 ಸಾವಿರ ರೂ. ಲಂಚ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಸುಮಾರು 4 ಲಕ್ಷ ರೂ. ಬಾಕಿ ಸಂಬಳ ಬಿಡುಗಡೆ ಮಾಡುವ ವಿಚಾರ ಇದಾಗಿದೆ.

ಲಂಚ ನೀಡಲು ನಿರಾಕರಿಸಿದ ಮಹದೇವ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಮುಂಗಡವಾಗಿ 25 ಸಾವಿರ ರೂ. ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಂಜುಳಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬಂಧನವಾಗುತ್ತಿದ್ದಂತೆಯೇ ಗಾಬರಿಯಾದ ಮಂಜುಳಾ, ಕಚೇರಿಯಲ್ಲೇ ಹರಿತವಾದ ಆಯುಧದಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಯ ನಾಟಕವಾಡಿ ಅಧಿಕಾರಿಗಳ ಮುಂದೆ ಗದ್ದಲ ಸೃಷ್ಟಿಸಿದರು. ಇದರಿಂದ ತನಿಖೆಗೆ ಅಡ್ಡಿಪಡಿಸಲು ಯತ್ನಿಸಿದರೆಂದು ತಿಳಿದುಬಂದಿದೆ.
ಗಾಯಗೊಂಡ ಮಂಜುಳಾ ಅವರನ್ನು ತಕ್ಷಣ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಬಳಿಕ ಲೋಕಾಯುಕ್ತ ಪೊಲೀಸರು ಮುಂದಿನ ವಿಚಾರಣೆ ನಡೆಸಲಿದ್ದಾರೆ.








