ಮೈಸೂರು: ರಾಜ್ಯದ ವಿವಿಧೆಡೆ ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಮೃತಪಟ್ಟ ಘಟನೆಗಳು ವರದಿಯಾಗಿವೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಎನ್. ಜರಕುಂಟಿ ಗ್ರಾಮದಲ್ಲಿ ಬಾಲಕ ಮಂಜುನಾಥ ಮುದೇಗೌಡ (15) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಮುತ್ತಂಗಿಯಲ್ಲಿ ರೈತ ವೈಜಿನಾಥ ಶೇರಗರ್ (60) ಸಿಡಿಲಿಗೆ ಬಲಿಯಾಗಿದ್ದು, ಅವರ ಪುತ್ರ ಶ್ರೀನಿವಾಸ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಒಂದು ತಾಸು ಆಲಿಕಲ್ಲು ಸಹಿತ ಮಳೆಯಾಗಿ ರಿಂಗ್ ರಸ್ತೆ, ಸಾಲಗಾಮೆ ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ಹಲವೆಡೆ ಆಲಿಕಲ್ಲುಗಳ ರಾಶಿ ಕಂಡುಬಂದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ ಹಗುರ ಮಳೆಯಾಗಿದ್ದು, ಮೈಸೂರು ನಗರ ಹಾಗೂ ಕೊಡಗಿನ ನಾಪೋಕ್ಲು, ವಿರಾಜಪೇಟೆಯಲ್ಲಿ ಸಾಧಾರಣ ಮಳೆಯಾಗಿದೆ.
ದಾವಣಗೆರೆ ಜಿಲ್ಲೆಯ ವಿವಿಧೆಡೆ ಹಾಗೂ ಹರಿಹರ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಹೊಸದುರ್ಗ, ಚಿಕ್ಕಜಾಜೂರು ಭಾಗದಲ್ಲೂ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಕಡೂರು ಮತ್ತು ಬೀರೂರಲ್ಲಿ ತುಂತುರು ಮಳೆಯಾಗಿದೆ.
ರಾಯಚೂರು ಜಿಲ್ಲೆಯ ಕವಿತಾಳ ಮತ್ತು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿ, ಕಟಾವು ಮಾಡಿ ಒಣಹಾಕಿದ್ದ ಸಜ್ಜೆ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡಿದರು.
ಕಲಬುರಗಿಯಲ್ಲಿ ತುಂತುರು ಮಳೆಯಾಗಿದ್ದು, ಚಿಂಚೋಳಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ.ಇದನ್ನು ಓದಿ –ಮಹಿಳಾ ಪಿಡಿಒ ಲಂಚ ಸ್ವೀಕಾರ : ಲೋಕಾಯುಕ್ತ ಬಲೆ
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಉಜಿರೆ ಹಾಗೂ ಬೆಳ್ತಂಗಡಿಯಲ್ಲಿ ರಾತ್ರಿ ಉತ್ತಮ ಮಳೆಯಾಗಿದೆ. ಈ ಮಳೆಯಿಂದಾಗಿ ಕೆಲವು ಕಡೆ ಬೆಳೆಗಳಿಗೆ ಹಾನಿಯ ಆತಂಕ ವ್ಯಕ್ತವಾಗಿದೆ.








