ಬೆಳಗಾವಿ: ಕಪ್ಪು ಬಣ್ಣದ ಕಾಗದ ಮತ್ತು ರಾಸಾಯನಿಕಗಳ ಮೂಲಕ ನೋಟುಗಳನ್ನು ಮುದ್ರಿಸಬಹುದು ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದ ಜಾಲವನ್ನು ಬೆಳಗಾವಿ ಜಿಲ್ಲೆಯ ಪೊಲೀಸರು ಪತ್ತೆ ಹಚ್ಚಿ, ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಗೋಕಾಕ ನಗರದ ಹನುಮಾನ ದೇವಸ್ಥಾನದ ಸಮೀಪದ ಮನೆಯೊಂದರ ಮೇಲೆ ಗೋಕಾಕ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಈ ಗ್ಯಾಂಗ್‌ನ್ನು ಪತ್ತೆ ಹಚ್ಚಿದ್ದಾರೆ. ಇನ್ನೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿ, ‘ಮನಿ ಡಬ್ಲಿಂಗ್’ ಎಂಬ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ಈ ತಂಡ ಆಸ್ತಿ ವಂಚನೆಗೂ ಕೈಹಾಕಿತ್ತು ಎಂದು ತಿಳಿಸಿದ್ದಾರೆ. ಗೋಕಾಕದ ಮೂವರು ಆರೋಪಿಗಳು ಮಹಾರಾಷ್ಟ್ರದ ಜಯಶ್ರೀ ಬಾಬು ಎಂಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದು, ಜನರನ್ನು ಮೋಸಗೊಳಿಸಲು ಈ ಜಾಲವನ್ನು ಬಳಸುತ್ತಿದ್ದರು.
ಆರೋಪಿಗಳು ನೈಜ ಕರೆನ್ಸಿ ನೋಟುಗಳಿಗೆ ಕಪ್ಪು ಬಣ್ಣದ ರಾಸಾಯನಿಕ ಹಚ್ಚಿ, ಅವುಗಳನ್ನು ಒಣಗಿಸಿ ಕಪ್ಪು ಕಾಗದದಂತೆ ತೋರಿಸುತ್ತಿದ್ದರು. ನಂತರ ಅವುಗಳನ್ನು ಬಿಸಿ ಮಾಡಿ ವಿಶೇಷ ದ್ರಾವಣದಲ್ಲಿ ಹಾಕಿದರೆ ಮತ್ತೆ ನಿಜವಾದ ನೋಟುಗಳಾಗುತ್ತವೆ ಎಂದು ಅಮಾಯಕರನ್ನು ನಂಬಿಸುತ್ತಿದ್ದರು.
ಈ ಮೂಲಕ ಸಂತ್ರಸ್ತರಿಂದ ₹50,000 ಪಡೆದು ₹2 ಲಕ್ಷ ಮೌಲ್ಯದ ‘ಮ್ಯಾಜಿಕ್’ ನೋಟುಗಳನ್ನು ನೀಡುವುದಾಗಿ ಹೇಳಿ ಕಪ್ಪು ಕಾಗದಗಳನ್ನು ಮಾರಾಟ ಮಾಡುತ್ತಿದ್ದರು.
ಈ ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಭಾಗಿಯಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ. ಒಬ್ಬ ಸ್ಥಳೀಯ ಆರೋಪಿಯು ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಬಿಸಿ ಮಾಡುವ ಯಂತ್ರ, ರಾಸಾಯನಿಕ ದ್ರಾವಣ ಮತ್ತು ಕಪ್ಪು ಕಾಗದಗಳನ್ನು ವಶಪಡಿಸಿಕೊಂಡಿದ್ದಾರೆ.ಇದನ್ನು ಓದಿ –ಗ್ಯಾಸ್ ಕೊರತೆ: ‘ಹೈ’ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್
ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.








