ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ 14 ದಿನಗಳ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಭಾರೀ ಕುಸಿತ ಕಂಡಿದೆ.
ಕದನ ವಿರಾಮದ ಸುದ್ದಿಯಿಂದ ಕಚ್ಚಾ ತೈಲದ ಬೆಲೆಗಳು ಒಂದೇ ದಿನದಲ್ಲಿ ಸುಮಾರು 13% ರಿಂದ 17% ರಷ್ಟು ಇಳಿಕೆಯಾಗಿವೆ. ಇದು ಕಳೆದ ಆರು ವರ್ಷಗಳಲ್ಲಿ ಒಂದೇ ದಿನದಲ್ಲಿ ಕಂಡ ಅತಿ ದೊಡ್ಡ ಕುಸಿತವಾಗಿದೆ.
ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಸುಮಾರು 16.13 ಡಾಲರ್ (14.3%) ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 96.82 ಡಾಲರ್ (ಸುಮಾರು ₹8,940) ತಲುಪಿದೆ. ಅದೇ ವೇಳೆ ಜಾಗತಿಕ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ದರ 14.84 ಡಾಲರ್ (13.6%) ಇಳಿದು ಪ್ರತಿ ಬ್ಯಾರೆಲ್‌ಗೆ 94.43 ಡಾಲರ್ (ಸುಮಾರು ₹8,720) ಆಗಿದೆ.
ಈ ಘೋಷಣೆಗೆ ಮುನ್ನ ಯುದ್ಧದ ಆತಂಕದಿಂದ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 117 ರಿಂದ 120 ಡಾಲರ್‌ವರೆಗೆ (ಸುಮಾರು ₹11,000) ಏರಿಕೆಯಾಗಿತ್ತು. ಆದರೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮುಕ್ತಗೊಳಿಸಲು ಒಪ್ಪಿಗೆ ನೀಡಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿನ ಆತಂಕ ಕಡಿಮೆಯಾಗಿ, ಪೂರೈಕೆ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿಂದ ತೈಲದ ದರ ಕುಸಿದಿದೆ.ಇದನ್ನು ಓದಿ –“ಇಂದು ರಾತ್ರಿ ನಾಗರಿಕತೆ ಅಂತ್ಯವಾಗಬಹುದು”; ಇರಾನ್‌ಗೆ ಟ್ರಂಪ್ ಎಚ್ಚರಿಕೆ
ಜಗತ್ತಿನ ಸುಮಾರು 20% ತೈಲ ಪೂರೈಕೆ ಹಾರ್ಮುಜ್ ಜಲಸಂಧಿ ಮೂಲಕವೇ ಸಾಗುವುದರಿಂದ ಈ ಬೆಳವಣಿಗೆ ಮಾರುಕಟ್ಟೆಯ ಮೇಲೆ ಮಹತ್ವದ ಪರಿಣಾಮ ಬೀರಿದೆ.








