ಮಂಗಳೂರು: ನಗರದಲ್ಲಿ ಆತಂಕ ಹುಟ್ಟಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳೇ ಡ್ರಗ್ಸ್ ಮಾರಾಟ ಜಾಲದಲ್ಲಿ ತೊಡಗಿರುವುದು ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದು, ವಿದ್ಯಾರ್ಥಿಯೊಬ್ಬನ ಪೋಷಕರು ತಮ್ಮ ಮಗನ ಬಳಿ ಸಣ್ಣ ಪ್ರಮಾಣದ ಗಾಂಜಾ ಪ್ಯಾಕೆಟ್ ಪತ್ತೆಯಾಗಿದೆ ಎಂದು ಮಂಗಳವಾರ ಪೊಲೀಸರಿಗೆ ತಿಳಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿದಾಗ, ಐವರು ವಿದ್ಯಾರ್ಥಿಗಳು ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿರುವುದು ಬಹಿರಂಗವಾಗಿದೆ.
ಬಂಧಿತರು ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹಾಸ್ಟೆಲ್‌ನಲ್ಲಿ ಇರದೇ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಇದೇ ಕೊಠಡಿಯಲ್ಲಿ ಗಾಂಜಾವನ್ನು ಸಣ್ಣ ಪೊಟ್ಟಣಗಳಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.
ಆರು ವಿವಿಧ ಕಾಲೇಜುಗಳ ಸುಮಾರು 40 ಮಂದಿ ವಿದ್ಯಾರ್ಥಿಗಳು ಹಾಗೂ ಇನ್ನೂ 10 ಮಂದಿ ಇವರ ಗ್ರಾಹಕರಾಗಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.ಇದನ್ನು ಓದಿ –ಕದನ ವಿರಾಮದ ಬಳಿಕವೂ ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ
ಡ್ರಗ್ಸ್ ಖರೀದಿ ಮಾಡಿದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಕರೆಸಿ ಕೌನ್ಸೆಲಿಂಗ್ ಮಾಡಲಾಗುತ್ತದೆ. ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಹಾಸ್ಟೆಲ್ ಹೊರಗೆ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ವಿದ್ಯಾರ್ಥಿಗಳ ಬಗ್ಗೆ ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿ ಹೆಚ್ಚು ಗಮನಹರಿಸಬೇಕು ಎಂದು ಪೊಲೀಸ್ ಆಯುಕ್ತರು ಸಲಹೆ ನೀಡಿದ್ದಾರೆ.








