ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಪೂರ್ಣಗೊಳಿಸಿದ್ದು, ಮಾನಸಿಕ ಖಿನ್ನತೆಯೇ ಸಾವಿಗೆ ಪ್ರಮುಖ ಕಾರಣ ಎಂಬ ತೀರ್ಮಾನಕ್ಕೆ ಬಂದಿದೆ.
ಆದಾಯ ತೆರಿಗೆ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿತ್ತು. ಆದರೆ ತನಿಖೆಯಲ್ಲಿ ಅಂತಹ ಒತ್ತಡದ ಯಾವುದೇ ಸಾಕ್ಷ್ಯ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ತನಿಖೆಯ ವೇಳೆ ಸಿಜೆ ರಾಯ್ ಹಲವು ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ಬಹಿರಂಗವಾಗಿದೆ. ಆದರೆ ಕೆಲ ತಿಂಗಳಿನಿಂದ ಚಿಕಿತ್ಸೆ ನಿಲ್ಲಿಸಿದ್ದು, ಮೃತ್ಯುವಿಗೆ ಮುನ್ನ ಒಂದು ತಿಂಗಳಿನಿಂದ ಔಷಧ ಸೇವನೆಯನ್ನೂ ನಿಲ್ಲಿಸಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಎಸ್‌ಐಟಿ ಹೇಳಿದೆ.
ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಯಾಗಿಲ್ಲವಾದರೂ, ಯಾವುದೇ ಹೊರಗಿನ ಒತ್ತಡ ಕಾರಣವಾಗಿಲ್ಲ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ.
ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಎಸ್‌ಐಟಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ.ಇದನ್ನು ಓದಿ –ಕರಾವಳಿಯಲ್ಲಿ ಬಿಸಿಗಾಳಿ ಎಚ್ಚರಿಕೆ; ಯೆಲ್ಲೋ ಅಲರ್ಟ್ ಜಾರಿ
ಸಿಜೆ ರಾಯ್ ಅವರು ಜನವರಿ 30ರಂದು ಬೆಂಗಳೂರಿನ ರಿಚ್‌ಮಂಡ್ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ವಿಚಾರಣೆಯ ಸಮಯದಲ್ಲಿ ತಮ್ಮ ಕೊಠಡಿಗೆ ತೆರಳಿ ಪಿಸ್ತೂಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.








