ಲಕ್ನೋ: ವೃಂದಾವನದ ಯಮುನಾ ನದಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಮಗುಚಿ ಭೀಕರ ದುರಂತ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದು, ಇನ್ನೂ ಐವರು ನಾಪತ್ತೆಯಾಗಿದ್ದಾರೆ.
ಪಂಜಾಬ್ನಿಂದ ಬಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಕೇಸಿ ಘಾಟ್ ಸಮೀಪ ಆಳವಾದ ನೀರಿಗೆ ಹೋಗಿ ತೇಲುತ್ತಿದ್ದ ಪಾಂಟೂನ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಇತ್ತೀಚೆಗೆ ನೀರಿನ ಮಟ್ಟ ಏರಿಕೆಯಿಂದಾಗಿ ಈ ಪ್ರದೇಶದ ಪಾಂಟೂನ್ ಸೇತುವೆಯನ್ನು ತೆರವುಗೊಳಿಸಲಾಗಿದ್ದು, ಕೆಲವು ಪಾಂಟೂನ್ ಡ್ರಮ್ಗಳು ನದಿಯಲ್ಲಿ ಉಳಿದಿದ್ದವು. ಅವುಗಳಲ್ಲಿ ಒಂದಕ್ಕೆ ಬೋಟ್ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ, ಅಗತ್ಯವಿರುವ ಎಲ್ಲ ರೀತಿಯ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ಪಂಜಾಬ್ ಸರ್ಕಾರ ನಿರಂತರ ಸಂಪರ್ಕದಲ್ಲಿದೆ.
ಮೃತರಲ್ಲಿ ಹೆಚ್ಚಿನವರು ಲುಧಿಯಾನಾದ ಜಗ್ರಾಂವ್ ಮತ್ತು ದುಗ್ರಿ ಪ್ರದೇಶದವರಾಗಿದ್ದಾರೆ. ಜಗ್ರಾಂವ್ನ ಶ್ರೀ ಬಂಕೆ ಬಿಹಾರಿ ಕ್ಲಬ್ ವತಿಯಿಂದ ಸುಮಾರು 120 ಯಾತ್ರಿಕರು ಏಪ್ರಿಲ್ 9ರಂದು ಎರಡು ಬಸ್ಗಳಲ್ಲಿ ನಾಲ್ಕು ದಿನಗಳ ಪ್ರವಾಸಕ್ಕೆ ವೃಂದಾವನಕ್ಕೆ ತೆರಳಿದ್ದರು.
ಮೃತರಾದವರು: ಕವಿತಾ ರಾಣಿ (49), ಚರಂಜಿತ್ (40), ಸಪ್ನಾ ಹನ್ಸ್ (55), ರಿಕೇಶ್ ಗುಲಾಟಿ, ಮಧುರ್ ಬೆಹ್ಲ್, ಆಶಾ ರಾಣಿ, ಪಿಂಕಿ ಬೆಹ್ಲ್, ಅಂಜು ಗುಲಾಟಿ, ಇಶಾನ್ ಕಟಾರಿಯಾ ಮತ್ತು ಮಿನು ಬನ್ಸಾಲ್.
ನಾಪತ್ತೆಯಾದವರು: ಮಾಣಿಕ್ ಟಂಡನ್, ಪಂಕಜ್ ಮಲ್ಹೋತ್ರಾ, ರಿಷಬ್ ಶರ್ಮಾ, ಯಶ್ ಭಲ್ಲಾ ಮತ್ತು ಮೋನಿಕಾ.
ಗಾಯಗೊಂಡವರಲ್ಲಿ ಪಿಂಕಿ, ಮಂಜು, ಸವಿತಾ, ತನೀಶ್ ಜೈನ್, ರೇಖಾ, ರಾಜಿಂದರ್ ಕೌರ್, ಸರೋಜ್ ಮತ್ತು ಡಾಲಿ ಸೇರಿದಂತೆ ಹಲವರು ಚಿಕಿತ್ಸೆ ಪಡೆಯುತ್ತಿದ್ದು, ಇತರರ ಸ್ಥಿತಿ ಸ್ಥಿರವಾಗಿದೆ.ಇದನ್ನು ಓದಿ –ಬೆಂ–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲುಗೆ ಅಸ್ತು
ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಅಗ್ನಿಶಾಮಕ ದಳ, ನಾಗರಿಕ ರಕ್ಷಣಾ ತಂಡಗಳು, ಸೇನೆ ಹಾಗೂ ಸ್ಥಳೀಯ ಡೈವರ್ಗಳು ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.








