- ಮುಂದಿನ 5 ದಿನ ಬಿಸಿಲಿನ ತೀವ್ರತೆ ಹೆಚ್ಚಳ
ಬೆಂಗಳೂರು: ಬೇಸಿಗೆ ಆರಂಭದಲ್ಲೇ ಸೂರ್ಯನ ತಾಪಮಾನ ತೀವ್ರವಾಗಿದ್ದು, ಭಾರತೀಯ ಹವಾಮಾನ ಇಲಾಖೆ(IMD) ರಾಜ್ಯದ ಹಲವು ಭಾಗಗಳಿಗೆ ತಾಪಮಾನ ಏರಿಕೆ ಎಚ್ಚರಿಕೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡು ಪ್ರದೇಶಗಳಲ್ಲಿ ಮುಂದಿನ ನಾಲ್ಕು ರಿಂದ ಐದು ದಿನಗಳಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಸಮೀಪ ದಾಖಲಾಗುತ್ತಿದೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಸೂಚನೆ ನೀಡಲಾಗಿದ್ದು, ಬೆಂಗಳೂರಿನಲ್ಲಿ ಸದ್ಯ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು 37 ರಿಂದ 38 ಡಿಗ್ರಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.
ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ತೀವ್ರ ಬಿಸಿಲು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ, ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಉತ್ತರ ಒಳನಾಡಿನ ಬೀದರ್, ರಾಯಚೂರು, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ತಾಪಮಾನ 42 ರಿಂದ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಸುಮಾರು 2 ಡಿಗ್ರಿ ಏರಿಕೆಯಾಗುವ ನಿರೀಕ್ಷೆಯಿದೆ.
ಇನ್ನೂ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ತಾಪಮಾನ 2 ರಿಂದ 3 ಡಿಗ್ರಿವರೆಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.








