ಅಮಂಡಾ ನ್ಗುಯೆನ್ ಎಂಬ ವಿಯಟ್ನಾಮಿ ಯುವತಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಳು. ತನ್ನ ಓದಿನ ಕೊನೆಯ ಸೆಮಿಸ್ಟರ್ ನಲ್ಲಿ ಇರುವಾಗ ಆಕೆಯ ಮೇಲೆ ಬಲಾತ್ಕಾರವಾಯಿತು. ಸಾಮಾನ್ಯವಾಗಿ ರೇಪ್
ಸಂತ್ರಸ್ತರಿಗೆ ಹೇಳುವ ಎಲ್ಲ ರೀತಿಯ ಪ್ರಕ್ರಿಯೆಗಳಿಗೆ ಆಕೆ ಕೂಡ ಒಳಗಾದಳು. ಈ ಸಮಯದಲ್ಲಿ ಆಕೆಯ ಅರಿವಿಗೆ ಬಂದದ್ದು ಬಲಾತ್ಕಾರದ ಸಮಯದಲ್ಲಿ ಪೀಡಿತರು ಧರಿಸಿದ ಬಟ್ಟೆಗಳು ಹಾಗೂ ದೇಹದ ಮೇಲಿನ ಮಾದರಿಗಳನ್ನು ಸಂಗ್ರಹಿಸಿ ಇಡುತ್ತಾರೆ, ಆದರೆ ಅವುಗಳನ್ನು ಮುಂದಿನ ಆರು ತಿಂಗಳಲ್ಲಿ ನಾಶ ಮಾಡಿ ಬಿಡುತ್ತಾರೆ ಎಂಬುದು ಆಕೆಗೆ ನಂತರ ಗೊತ್ತಾಯಿತು. ಆ ಮಾದರಿಗಳನ್ನು ಕಾನೂನು ಕ್ರಮದ ಪ್ರಕಾರ ಜತನವಾಗಿ ಇಡಲು ಪ್ರತಿ ಆರು ತಿಂಗಳಿಗೊಮ್ಮೆ ಆಕೆ ತನ್ನ ಕೇಸನ್ನು ಪುನರ್ ಪರಿಶೀಲಿಸುವಂತೆ ನ್ಯಾಯಾಲಯದ ಮೊರೆ ಹೋಗಲೇಬೇಕು…. ಆಗ ಆಕೆಗೆ ಕೇವಲ 22 ವರ್ಷ.
ಚಿಕ್ಕವಯಸ್ಸಿನವಳಾಗಿದ್ದು ಈ ರೀತಿಯ ತೊಂದರೆಯಿಂದ ಸಂತ್ರಸ್ತರು ಮತ್ತಷ್ಟು ತೊಂದರೆ ಪಡದೆ ಇರಲು ಆ ದೇಶದ ಫೆಡರಲ್ ಕಾನೂನನ್ನು ಬದಲಿಸಲೇಬೇಕು ಎಂದು ನಿರ್ಧರಿಸಿದಳು.
ಮುಂದೆ ನಾಸಾದಲ್ಲಿ ಇಂಟರ್ನ ಆಗಿ ಕಾರ್ಯನಿರ್ವಹಿಸಿದ ಆಕೆಯ ಕಣ್ಣ ಮುಂದೆ ಅತಿದೊಡ್ಡ ಯೋಜನೆಗಳಿದ್ದವು. ಅತ್ಯಂತ ಕಠಿಣ ಪರಿಶ್ರಮವನ್ನು ಬಯಸುತ್ತಿದ್ದ ಆಕೆಯ ಭವಿಷ್ಯವನ್ನು ಭದ್ರವಾಗಿ ರೂಪಿಸುತ್ತಿದ್ದ ಆಕೆಯ ಕನಸು ಇನ್ನೇನು ಕೈಗೆಟಕುವಂತಿತ್ತು ಅಂತಹ ಸಮಯದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಯಿತು ಅತ್ಯಾಚಾರದ ನಂತರ ಆಕೆ ನೇರವಾಗಿ ಆಸ್ಪತ್ರೆಗೆ ಹೋದಳು. ಪೊಲೀಸರಿಗೆ ನಡೆದ ವಿಷಯವನ್ನು ಹೇಳಿದೂರನ್ನು ದಾಖಲಿಸಿದಳು. ಅವರ ಮೂಲಕ ತನ್ನ ದೇಹದ ಪರೀಕ್ಷೆಗೆ ಒಡ್ಡಿಕೊಂಡಳು. ಅತ್ಯಂತ ಕಾಳಜಿ ಪೂರ್ವಕವಾಗಿ ನಿರ್ಣಯವೊಂ ದು ಕೈಗೊಂಡ ಆಕೆ ತನ್ನ ಅತ್ಯಾಚಾರದ ನಂತರದ ಎಲ್ಲಾ ಮಾದರಿಗಳನ್ನು ಒಳಗೊಂಡ ರೇಪ್ ಕಿಟ್ಟನ್ನು ಅನಾಮಧೇಯವಾಗಿ ಇರಿಸಿ ದೂರನ್ನು ದಾಖಲಿಸಿದಳು. ಮುಂದೆ ನಾಸಾದಲ್ಲಿ ಕೆಲಸ ಮಾಡುತ್ತಾ ತನ್ನ ಕನಸಿನ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅತ್ಯವಶ್ಯಕವಾದ ಸೆಕ್ಯೂರಿಟಿ ಕ್ಲಿಯರೆನ್ಸ್ ನಲ್ಲಿ ಅಡ್ಡಿಯಾಗಬಹುದು ಎಂಬುದು ಆಕೆಯ ಭಾವವಾಗಿತ್ತು… ಅದು ನಿಜವೂ ಕೂಡ. ಆಗಲೇ ಆಕೆಗೆ ಗೊತ್ತಾದದ್ದು ವ್ಯವಸ್ಥೆ ಅದೆಷ್ಟು ಕೆಟ್ಟದಾಗಿ ಹೋಗಿದೆ ಎಂದು.
ಆಕೆ ಅನಾಮಧೇಯವಾಗಿ ದೂರನ್ನು ದಾಖಲಿಸಿದ ಪರಿಣಾಮವಾಗಿ ಮೆಸಾಚ್ಯುಸೆಟ್ಸ್ ನ ನ್ಯಾಯಾಲಯವು ಆಕೆಗೆ ಕಿಟ್ಟನ್ನು ಭದ್ರವಾಗಿರಿಸಲು ಆರು ತಿಂಗಳ ಅವಧಿಯನ್ನು ಮಾತ್ರ ನೀಡಿತು. ಆಕೆಯ ದೇಹದ ಮೇಲಿನ ಸ್ಯಾಂಪಲ್ ಗಳನ್ನು ಆರು ತಿಂಗಳ ನಂತರ ಶಾಶ್ವತವಾಗಿ ನಾಶ ಮಾಡಲಾಗುತ್ತದೆ. ಆ ಪ್ರಕರಣದ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಲು ಮುಂದಿನ 15 ವರ್ಷಗಳ ಕಾಲದ ಗಡುವನ್ನು ನೀಡಿತು.
ಆ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಅಧಿಕಾರಿಗಳ ನೆರವಿನ ಹಸ್ತ ಆಕೆಗೆ ದೊರೆಯಲಿಲ್ಲ. ಯಾವ ರೀತಿ ಮುಂದುವರೆಯಬೇಕು ಎಂದು ಸಲಹೆ ಸೂಚನೆಗಳನ್ನು ಕೊಡುವವರು ಕೂಡ ಇರಲಿಲ್ಲ ಎಲ್ಲವನ್ನು ಆಕೆ ತಾನಾಗಿಯೇ ನೋಡಿಕೊಳ್ಳಬೇಕಾಗಿತ್ತು . ಪ್ರತಿ ಆರು ತಿಂಗಳಿಗೊಮ್ಮೆ ಆಕೆ ತನ್ನ ರೇಪ್ ಕಿಟ್ಟನ್ನು ಬಚಾವ್ ಮಾಡಿಕೊಳ್ಳಲು ತನಗೆ ನ್ಯಾಯ ದೊರಕಿಸಿಕೊಡಿರಿ ಎಂದು ಒತ್ತಾಯಪೂರ್ವಕವಾಗಿ ಅರ್ಜಿಯನ್ನು ನವೀಕರಿಸಬೇಕಾಗುತ್ತಿತ್ತು. ಇದೀಗ ಆಕೆ ಸರಿಸುಮಾರು 50 ರಾಜ್ಯಗಳಲ್ಲಿ ಇರುವ ರೇಪ್ ಕಿಟ್ ಗಳ ಕುರಿತಾದ ಕಾನೂನಿನ ಅರಿವನ್ನು ಹೊಂದಲು ಸಂಶೋಧನೆಯನ್ನು ಆರಂಭಿಸಿದಳು. ಆದರೆ ಆಕೆಗೆ ಅರಿವಾದ ವಿಷಯ ದಿಗ್ಭ್ರಮೆ ಮೂಡಿಸುತ್ತಿತ್ತು. ಕೆಲ ರಾಜ್ಯಗಳು ವರ್ಷಗಟ್ಟಲೆ ರೇಪ್ ಡೇಟ್ ಗಳನ್ನು ಕಾದಿರಿಸಿದರೆ ಮತ್ತೆ ಕೆಲವರು ಕೇವಲ 30 ದಿನಗಳಲ್ಲಿ ಅವುಗಳನ್ನು ನಾಶ ಮಾಡುತ್ತಿದ್ದರು. ಮತ್ತೇ ಕೆಲ ರಾಜ್ಯಗಳಲ್ಲಿ ಸಂತ್ರಸ್ತರಿಂದ ರೇಪ್ ಕಿಟ್ ಗಳನ್ನು ಸಂರಕ್ಷಿಸಲು ಹಣವನ್ನು ವಸೂಲು ಮಾಡಲಾಗುತ್ತಿತ್ತು. ಇತರರು ಸಂತ್ರಸ್ತರು ಕುರಿತು ಯಾವುದೇ ಕಾಳಜಿಯನ್ನು ಹೊಂದಿರಲಿಲ್ಲ ಮತ್ತೆ ಕೆಲವರು ತಮ್ಮ ರೇಪ್ ಕಿಟ್ ಏನಾಯ್ತು ಎಂದು ಕೂಡ ತಲೆಕೆಡಿಸಿಕೊಳ್ಳದೆ ಹೋದರು. ಅಸ್ಥಿರ ಹಾಗೂ ಅಪ್ರಮಾಣತೆ ಎಲ್ಲ ಕಡೆ ತಾಂಡವವಾಡುತ್ತಿತ್ತು
ಆಯಾ ದೇಶದ ಭೂಗೋಳದ ಮೇಲೆ ಕಾನೂನು ನಿರ್ಭರವಾಗಬಾರದು ಎಂದು ಹೇಳಿದ ಆಕೆ 2014ರ ನವೆಂಬರ್ ತಿಂಗಳಿನಲ್ಲಿ ಕಮಾಂಡ ರೈಸ್ ಅನ್ನೋನ್ ಪ್ರಾಫಿಟ್ ಡೆಡಿಕೇಟೆಡ್ ಟು ಚೇಂಜಿಂಗ್ ದಟ್ ರಿಯಾಲಿಟಿ ಎಂಬ ಸಂಸ್ಥೆಯನ್ನು ಆರಂಭಿಸಿದಳು. ಈ ಸಂಸ್ಥೆಯ ಮುಖ್ಯ ಉದ್ದೇಶ ಕ್ರೌಡ್ ಫಂಡಿಂಗ್ ನ ಮೂಲಕ ಸಾಕಷ್ಟು ಹಣವನ್ನು ಸಂಗ್ರಹಿಸಿ ರೇಪ್ ಸಂತ್ರಸ್ತ ಮಹಿಳೆಯರಿಗೆ ಧನ ಸಹಾಯ ಮಾಡುವುದು ಅವರ ಅವಶ್ಯಕತೆಗಳನ್ನು ಪೂರೈಸುವುದಾಗಿತ್ತಲ್ಲದೇ ರಾಷ್ಟ್ರದ ಫೆಡರಲ್ ಕಾನೂನಿನಲ್ಲಿ ಮಾರ್ಪಾಟನ್ನು ತರುವುದು ಅವರ ಉದ್ದೇಶವಾಗಿತ್ತು.
ಇಡೀ ದೇಶದಾದ್ಯಂತ ಆಕೆ ಓಡಾಡಿ ಕಾನೂನುತಜ್ಞರನ್ನು ಭೇಟಿಯಾದಳು. ಆಕೆಯ ಸಿಬ್ಬಂದಿಗಳು ಇದು ತಮ್ಮ ಆದ್ಯತೆ ಅಲ್ಲ ಎಂದು ಹೇಳಿದರು, ಮತ್ತೆ ಕೆಲವರು ಆಕೆಯ ಕಥೆಯನ್ನು ಪ್ರಶ್ನಿಸಿದರು ಆದರೂ ಆಕೆ ಹಿಂದೆ ಸರಿಯಲಿಲ್ಲ. ಕೋರ್ಟ್ ರೂಮ್ ನ ಒಳಗೆ ಆಕೆ ನ್ಯಾಯಾಧೀಶರ ಕಣ್ಣಲ್ಲಿ ಕಣ್ಣಿಟ್ಟು ನಾನೊಬ್ಬ ರೇಪ್ ಸಂತ್ರಸ್ಥೆ ನಾನೇ ನಿಮ್ಮ ಎದುರಿಗೆ ಜೀವಂತ ಸಾಕ್ಷಿಯಾಗಿ ಇದ್ದೇನೆ ಎಂದು ದಿಟ್ಟತನದಿಂದ ಹೇಳುತ್ತಿದ್ದಳು.
ಮತ್ತೋರ್ವ ಸೆನೆಟರ್ ಆದ ಜಿಯಾನಿ ಶಾಹಿನ್ ಅವರೊಂದಿಗೆ ಸೇರಿ ಆಕೆ ಸೆಕ್ಶುವಲ್ ಅಸಾಲ್ಟ್ ಸರ್ವೈವರ್ಸ್ ರೈಟ್ಸ್ ಆಕ್ಟ್ ನ ಕುರಿತು ಕಾನೂನನ್ನು ಮಾಡಲು ಒತ್ತಾಯಿಸಿದಳು. ರೇಪ್ ಸಂತ್ರಸ್ತರು ತಮ್ಮ ರೇಪ್ ಕಿಟ್ಟನ್ನು ಕಾಯ್ದಿರಿಸಲು ಯಾವುದೇ ರೀತಿಯ ಹಣ ಸಂದಾಯ ಮಾಡದಂತೆ ತಡೆ ಹಿಡಿಯಬೇಕು ಎಂಬುದು ಅವರ ಮೊದಲ ಆಶಯವಾದರೆ, ರೇಪ್ ಕಿಟ್ ಗಳನ್ನು ನಾಶ ಮಾಡುವ ಕನಿಷ್ಠ ಎರಡು ತಿಂಗಳು ಮುಂಚೆ ಸಂಬಂಧಪಟ್ಟವರಿಗೆ ಆ ಕುರಿತು ನೋಟಿಸು ಕಳುಹಿಸಬೇಕು ಎಂಬುದು ಅವರ ಎರಡನೆಯ ವಾದವಾಗಿತ್ತು
2016ರ ಫೆಬ್ರವರಿ ತಿಂಗಳಲ್ಲಿ ಈ ಕಾನೂನನ್ನು ಪರಿಚಯಿಸಲಾಯಿತು…ಸೆನೆಟ್ನಲ್ಲಿಯೂ ಕೂಡ ಇದು ಅನಾಮಿಕವಾಗಿ ಒಪ್ಪಿಗೆಯಾಯಿತು. ಅಲ್ಲಿನ ಮೇಲ್ಮನೆಯಲ್ಲೂ ಕೂಡ ಇದನ್ನು ಅತ್ಯಂತ ಗೌಪ್ಯವಾಗಿಟ್ಟು, ಕೇವಲ ಒಬ್ಬರ ಪ್ರತಿರೋಧದ ನಡುವೆ ಪಾಸು ಮಾಡಲಾಯಿತು.
ಅಂತಿಮವಾಗಿ 2016ರ ಅಕ್ಟೋಬರ್ 7ರಂದು ಅಮೆರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಲೈಂಗಿಕ ಸಂತ್ರಸ್ತರ ಹಕ್ಕುಗಳ ಕುರಿತಾಗಿ ಮಂಡನೆಯಾದ ಮಸೂದೆಗೆ ಸಹಿ ಹಾಕಿದರು. ಇದೀಗ ಅಮಂಡ ನವೇನ್ 24ರ ಹರೆಯಕ್ಕೆ ಕಾಲಿಟ್ಟಿದ್ದರು
ಆಕೆಯೇ ಸ್ಥಾಪಿಸಿದ ರೈಸ್ ಸಂಸ್ಥೆಯು ಎಲ್ಲ ರಾಜ್ಯಗಳಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿತು ಇದುವರೆಗೂ ರೈಸ್ ಸಂಸ್ಥೆಯ ಸಹಾಯದಿಂದ 33 ಕಾನೂನುಗಳನ್ನು ಮಂಡಿಸಿ ಅಮೆರಿಕದಾದ್ಯಂತ ಸರಿಸುಮಾರು 84 ಮಿಲಿಯನ್ ರೇಪ್ ಸಂತ್ರಸ್ತರಿಗೆ ರಕ್ಷಣೆಯನ್ನು ಒದಗಿಸಿದೆ
ಹೆಣ್ಣು ಮಕ್ಕಳ ಅದರಲ್ಲೂ ರೇಪ್ ಸಂತ್ರಸ್ರ ಹೆಣ್ಣುಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ ಪ್ರಾರಂಭವಾದ ಈ ಸಂಸ್ಥೆಗೆ ಯಾವುದೇ ರೀತಿಯ ಆರ್ಥಿಕ ಸಹಾಯ ಇರಲಿಲ್ಲ ಆದರೆ ಕೇವಲ ಸ್ವಯಂಸೇವಕರ ಕೈಗೊಳ್ಳಲಾದ ಈ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿ ಜನರ ಗಮನ ಸೆಳೆಯಿತು ಮಾತ್ರವಲ್ಲದೆ ಅತ್ಯಂತ ಪರಿಣಾಮಕಾರಿಯಾದ ನಾಗರಿಕ ಹಕ್ಕುಗಳ ಕುರಿತು ತಲೆಮಾರುಗಳ ಜನರಿಗೆ ಪಾಠವಾಗಿ ಪರಿಣಮಿಸಿತ್ತು
2024ರಲ್ಲಿ ಬ್ಲೂ ಒರಿಜಿನ್ ತನ್ನ ಮೊಟ್ಟಮೊದಲ ವಿಯೆಟ್ನಾಮಿ ಹೆಣ್ಣುಮಗಳು ಬಾಹ್ಯಾಕಾಶಕ್ಕೆ ಹೋಗುತ್ತಿರುವುದಾಗಿ ಪ್ರಕಟಿಸಿತು… ಆ ಹೆಣ್ಣು ಮಗಳು ಒಂದೊಮ್ಮೆ ತನ್ನ ಬದುಕಿನ ಹಕ್ಕನ್ನು ಸಾಧಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದರೆ ಅದು ತನ್ನ ಭವಿಷ್ಯಕ್ಕೆ ಅಡ್ಡ ಹಾಲಾಗುತ್ತದೆ ಎಂದು ಭಯ ಪಟ್ಟ ಅಮಂಡಾ ನ್ಗುಯೆನ್ ಇದೀಗ ಆಕೆ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮಕರಣಗೊಂಡಿದ್ದು ಆ ಟೈಮ್ ಉಮನ್ ಆಫ್ ದ ಇಯರ್ ಎಂದು ಕರೆಯಲ್ಪಟ್ಟಿದ್ದಾರೆ ಈ ಕುರಿತು ಆಕೆ ಒಂದು ನೆನಪಿನ ಭೀತಿಯನ್ನು ರಚಿಸಿದ್ದು ಅದಕ್ಕೆ ಆಕೆ.ಸೇವಿಂಗ್ ಫೈವ್ ಎಂಬ ಹೆಸರನ್ನು ಕೊಟ್ಟಿದ್ದಾರೆ.
ತನ್ನ ಬದುಕಿನ ಅತ್ಯಂತ ನೋವಿನ ಸಂಗತಿಯನ್ನು ಆಕೆ ಅತ್ಯಂತ ಮೌಲ್ಯಯುತವಾದ ಕಾನೂನು ರಚನೆಗೆ ಕಾರಣವಾದಳು. ಆಕೆಯ ಹೆಸರು ಕೂಡ ಗೊತ್ತಿರದ ಲಕ್ಷಾಂತರ ಹೆಣ್ಣು ಮಕ್ಕಳ ಪಾಲಿಗೆ ಆಕೆ ಮಾದರಿಯಾದಳು.
ಆಕೆ ಓರ್ವ ಕಾಲೇಜು ವಿದ್ಯಾರ್ಥಿಯಾಗಿದ್ದು ವ್ಯವಸ್ತೆಯು ಸರಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಬಯಸಿದಳು…. ಮಾತ್ರವಲ್ಲ ವ್ಯವಸ್ಥೆಯು ಕಾರ್ಯ ನಿರ್ವಹಿಸದೆ ಇದ್ದಾಗ ಆಕೆ ಅದನ್ನು ತನಗಾಗಿ ಮರು ನಿರ್ಮಿಸಿದಳು.
ಕೇವಲ ತನ್ನ ಬಳಿಗಾಗಿ ಹೋರಾಡದೆ ಅಮೆರಿಕಾದ ಎಲ್ಲಾ ರೇಪ್ ಸಂತ್ರಸ್ತ ಮಹಿಳೆಯರ ಪರವಾಗಿ ಕಾನೂನು ಕ್ರಮದಲ್ಲಿಯೇ ಬದಲಾವಣೆ ತಂದ ಅಮಂಡ ನವೇನ್ ರಂತಹವರ ಸಂತತಿ ಸಾವಿರವಾಗಲಿ.
ಎಷ್ಟೋ ಬಾರಿ ದಾರಿ ತೋರುವವರೇ ದಾರಿ ದೀಪವಾಗುತ್ತಾರೆ ಎಂಬುದಕ್ಕೆ ನಿದರ್ಶನವಾದ ಅಮಂಡಾ ನ್ಗುಯೆನ್ ರವರಿಗೆ ಅಭಿನಂದನೆಗಳು.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್








