ನವದೆಹಲಿ: ಇಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಆರಂಭವಾಗಲಿದೆ.
ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಎಂಕೆ-ಕಾಂಗ್ರೆಸ್ ಒಕ್ಕೂಟ ಹಾಗೂ ಎಐಎಡಿಎಂಕೆ-ಬಿಜೆಪಿ ಒಕ್ಕೂಟ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಈ ಬಾರಿ ಮೊದಲ ಬಾರಿಗೆ ತಮಿಳು ನಟ ದಳಪತಿ ವಿಜಯ್ ತಮ್ಮ ಟಿವಿಕೆ ಪಕ್ಷದ ಮೂಲಕ ಚುನಾವಣಾ ಕಣಕ್ಕಿಳಿದಿದ್ದಾರೆ. ಒಟ್ಟು 4,000ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಚುನಾವಣೆ ಹಿನ್ನೆಲೆ ಬೆಂಗಳೂರಿನಿಂದ ಸಾವಿರಾರು ಮಂದಿ ತಮಿಳುನಾಡಿನತ್ತ ತೆರಳಿದ್ದು, ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಟೋಲ್‌ನಿಂದ ಅತ್ತಿಬೆಲೆವರೆಗೆ ಸುಮಾರು 12 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಯಿತು. ಅಂಬುಲೆನ್ಸ್ ಸೇರಿದಂತೆ ವಾಹನ ಸವಾರರು ಪರದಾಡಿದರು.
ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ 152 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮುರ್ಶಿದಾಬಾದ್, ಜರ್ಗ್ರಾಮ್, ಮೇದಿನಿಪುರೆ, ಬಂಕುರಾ, ಪುರುಲಿಯಾ, ಪಶ್ಚಿಮ ಬರ್ಧಮಾನ್ ಮತ್ತು ಬಿರ್ಭೂಮ್ ಜಿಲ್ಲೆಗಳ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಮೊದಲ ಹಂತದಲ್ಲಿ 16 ಜಿಲ್ಲೆಗಳ 152 ಕ್ಷೇತ್ರಗಳಲ್ಲಿ 1,478 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೆಚ್ಚುವರಿ 4,660 ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 8,000ಕ್ಕೂ ಹೆಚ್ಚು ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.ಇದನ್ನು ಓದಿ –ಹಿಂದಿಗೆ ಗ್ರೇಡ್ ಬದಲು ಅಂಕ: ಮಧು ಬಂಗಾರಪ್ಪ
ರಾಜ್ಯದಾದ್ಯಂತ 780ಕ್ಕೂ ಹೆಚ್ಚು ಕೇಂದ್ರ ಭದ್ರತಾ ಪಡೆಗಳ ಕಂಪನಿಗಳನ್ನು ನಿಯೋಜಿಸಲಾಗಿದ್ದು, ಮತದಾನಕ್ಕೂ ಮುನ್ನ 199ಕ್ಕೂ ಹೆಚ್ಚು ಗೂಂಡಾಗಳನ್ನು ಬಂಧಿಸಲಾಗಿದೆ.








