ಬೆಂಗಳೂರು: ನಗರದ ಪ್ರಸಿದ್ಧ ಒನ್8 ಕಮ್ಯೂನ್ ರೆಸ್ಟೋರೆಂಟ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಸುಮಾರು ₹2 ಕೋಟಿ ಬಾಡಿಗೆ ಬಾಕಿ ಹಾಗೂ ನಿಯಮ ಉಲ್ಲಂಘನೆ ಆರೋಪಗಳ ಹಿನ್ನೆಲೆ ವ್ಯವಹಾರ ಸ್ಥಗಿತಗೊಂಡಿದೆ.
ಇತ್ತೀಚಿನ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಈ ಉದ್ಯಮದ ಮಾಲೀಕತ್ವದಿಂದ ಹಿಂದೆ ಸರಿದಿದ್ದು, ತಮ್ಮ ‘One8’ ಬ್ರ್ಯಾಂಡ್ ಹೆಸರನ್ನು ಬಳಸದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ಸುರಕ್ಷತಾ ನಿಯಮ ಉಲ್ಲಂಘನೆ ಹಾಗೂ ಕಾನೂನು ನೋಟಿಸ್‌ಗಳ ಹಿನ್ನೆಲೆ ಅವರು ಈ ವ್ಯವಹಾರದಿಂದ ದೂರ ಉಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಟ್ರಿಯೋ ಹಿಲ್ಸ್ ಹಾಸ್ಪಿಟಾಲಿಟಿ ನಿರ್ವಹಿಸುತ್ತಿದ್ದ ಈ ರೆಸ್ಟೋರೆಂಟ್ ಕಳೆದ ಆರು ತಿಂಗಳ ಬಾಡಿಗೆಯನ್ನು ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ. ಬಾಡಿಗೆ, ನಿರ್ವಹಣಾ ವೆಚ್ಚ ಮತ್ತು ಆದಾಯದ ಪಾಲು ಸೇರಿ ಒಟ್ಟು ₹2 ಕೋಟಿಗೂ ಹೆಚ್ಚು ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.
ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರು ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದು, ಬಾಕಿ ಹಣ ಪಾವತಿಸುವವರೆಗೆ ರೆಸ್ಟೋರೆಂಟ್ ಮುಚ್ಚುವಂತೆ ನ್ಯಾಯಾಲಯ ಆದೇಶಿಸಿದೆ.
ಇದಕ್ಕೂ ಮೊದಲು ಬಿಬಿಎಂಪಿ ಹಲವು ಬಾರಿ ನೋಟಿಸ್ ನೀಡಿತ್ತು. ಧೂಮಪಾನ ವಲಯದ ಕೊರತೆ, ಕಾನೂನುಬದ್ಧ ಅನುಮತಿ ಪತ್ರಗಳ ಅಭಾವ ಹಾಗೂ ಅಗ್ನಿಶಾಮಕ ಇಲಾಖೆಯ ಎನ್‌ಒಸಿ ಇಲ್ಲದೆ ರೆಸ್ಟೋರೆಂಟ್ ನಡೆಸಲಾಗುತ್ತಿತ್ತು ಎಂಬ ಆರೋಪಗಳಿವೆ. ಎಂ.ಜಿ.ರಸ್ತೆಯಲ್ಲಿರುವ ಈ ರೆಸ್ಟೋರೆಂಟ್ ನಿಗದಿತ ಸಮಯ ಮೀರಿಸಿ ಕಾರ್ಯನಿರ್ವಹಿಸಿದ್ದ ಕಾರಣಕ್ಕೂ ಪ್ರಕರಣ ದಾಖಲಾಗಿತ್ತು.
ಡಿಸೆಂಬರ್ 2023ರಲ್ಲಿ ಆರಂಭಗೊಂಡಿದ್ದ ಈ ರೆಸ್ಟೋರೆಂಟ್‌ನಲ್ಲಿ ವಿರಾಟ್ ಕೊಹ್ಲಿ ಹೆಸರಿನ ಬ್ರ್ಯಾಂಡ್ ಬಳಕೆಯೇ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಅವರು ಹಿಂದೆ ಸರಿದ ಬಳಿಕ ವ್ಯವಹಾರ ಮತ್ತು ಖ್ಯಾತಿ ಎರಡೂ ಕುಸಿದಿವೆ ಎನ್ನಲಾಗಿದೆ.ಇದನ್ನು ಓದಿ –ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ 3 ದಿನಗಳ ಬಳಿಕ ಸಾವು
ಈ ವಿಚಾರಕ್ಕೆ ಸಂಬಂಧಿಸಿ ವಿರಾಟ್ ಕೊಹ್ಲಿ ಅವರಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಸದ್ಯಕ್ಕೆ ರೆಸ್ಟೋರೆಂಟ್ ಸಂಪೂರ್ಣವಾಗಿ ಮುಚ್ಚಲಾಗಿದೆ.








