- ಡಿಕೆಶಿ ಬಣಕ್ಕೆ ತಣ್ಣಿರು
ಕಲಬುರಗಿ: ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಆದರೆ, ನಾಯಕತ್ವ ಬದಲಾವಣೆಯ ಗೊಂದಲ ಶೀಘ್ರದಲ್ಲಿಯೇ ಬಗೆಹರಿಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.
ಈ ಮೂಲಕ ಕಳೆದ ಒಂದು ವರ್ಷದಿಂದ ಕೇಳಿಬರುತ್ತಿದ್ದ ಸಿಎಂ ಬದಲಾವಣೆ ಗೊಂದಲಕ್ಕೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದೆ. ಆದರೆ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಖರ್ಗೆ ಅವರು ಮಾಹಿತಿ ನೀಡಲಿಲ್ಲ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲಗಳಿರುವುದು ನಿಜ. ಆದರೆ, ಅದು ಶೀಘ್ರವೇ ಬಗೆಹರಿಯಲಿದೆ. ನಾನು ಸಿಎಂ ಆಗಬೇಕೆಂದು ಕೆಲವರು ಹೇಳುತ್ತಾರೆ. ನೀವು ಮಾಧ್ಯಮದವರು ಕೂಡ ಆಗಾಗ ಆ ವಿಷಯ ಬಗ್ಗೆ ಮಾತನಾಡುತ್ತಿರುತ್ತೀರಿ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ಧಾಂತ ಮತ್ತು ದಶಕಗಳ ದುಡಿಮೆ ಮುಖ್ಯ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ ಮುಖ್ಯಮಂತ್ರಿಗಳಿದ್ದಾರೆ. ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಸಿಎಂ ಬದಲಾವಣೆ ಚರ್ಚೆ ಸದ್ಯಕ್ಕೆ ಉದ್ಭವಿಸುವುದಿಲ್ಲ. ಒಂದು ವೇಳೆ ಅಂತಹ ಸಂದರ್ಭ ಬಂದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಆ ಸಮಯ ಬಂದಾಗ ನೋಡೋಣ ಎಂದು ಹೇಳಿದರು.
ಬೌರಿಂಗ್ ಆಸ್ಪತ್ರೆಯ ಕಂಪೌAಡ್ ಕುಸಿತ ಪ್ರಕರಣ ಬಗ್ಗೆ ಮಾತನಾಡಿದ ಅವರು, ಅದು ಹಳೆಯ ಕಾಂಪೌAಡ್ ಆಗಿತ್ತು. ಎರಡನೆಯದಾಗಿ, ಅದನ್ನು ಸರಿಯಾಗಿ ನಿರ್ಮಿಸಲಾಗಿರಲಿಲ್ಲ. ಕೆಲವೆಡೆ ಮಣ್ಣಿನ ಗೋಡೆಗಳು, ಇನ್ನೂ ಕೆಲವೆಡೆ ಇಟ್ಟಿಗೆಯ ಗೋಡೆಗಳು ಇರುವುದನ್ನು ನಾನು ಗಮನಿಸಿದ್ದೇನೆ. ಕಾಂಪೌAಡ್‌ನ ಒಂದು ಭಾಗವನ್ನು ದುರಸ್ತಿಪಡಿಸಬೇಕು ಪಕ್ಕದಲ್ಲಿ ಕೂತು ವ್ಯಾಪಾರ ಮಾಡುತ್ತಿದ್ದವರಿಗೆ ತಕ್ಕ ಪರಿಹಾರ ನೀಡಬೇಕು ಎಂದರು.
ಮುಂದೆ ಯಾರೂ ಕಾಂಪೌಂಡ್ಗೆ ತಾಗಿಕೊಂಡೇ ಕೂತು ವ್ಯಾಪಾರ ಮಾಡಲು ಅವಕಾಶ ನೀಡಬಾರದು. ಬೆಂಗಳೂರಿನಲ್ಲಿ ನಡೆದಂತಹ ಘಟನೆ ನಾಳೆ ಇನ್ನೊಂದು ಕಡೆ ನಡೆಯಬಹುದು. ಸರ್ಕಾರ ಜಾಗ್ರತೆ ವಹಿಸಿ ಗಿಗ್ ಕಾರ್ಮಿಕರು ಅಥವಾ ಸಣ್ಣ ವ್ಯಾಪಾರಿಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದರು.
ಪಕ್ಷದ ಸಿದ್ಧಾಂತದಂತೆ ಸೋನಿಯಾ ಗಾಂಧಿ ನಿರ್ಧಾರಕರ್ನಾಟಕದಲ್ಲಿ ಸಿಎಂ ಬದಲಾವಣೆ ಮಾಡಬೇಕೆಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಅವರು ನಿರ್ಣಯ ತೆಗೆದುಕೊಂಡರೆ ಸಮಯ ಹಿಡಿಯುತ್ತದೆ. ನಾನು ಸಿಎಂ ಆದರೆ ಉತ್ತಮ ಎಂದು ಕೆಲವರು ಹೇಳುತ್ತಾರೆ. ನೀವೂ ಹೇಳುತ್ತೀರಿ, ಮೇಲಿನವರೂ ಹೇಳುತ್ತಾರೆ. ಆದರೆ ನಮ್ಮ ಹಣೆಬರಹ ಅನ್ನುವುದಕ್ಕಿಂತ ಪಕ್ಷದ ಸಿದ್ಧಾಂತ ಪ್ರಕಾರ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.
ಅದನ್ನು ಹೆಚ್ಚಾಗಿ ಸೋನಿಯಾ ಗಾಂಧಿ ನಿರ್ಧರಿಸುತ್ತಾರೆ ಎಂದು ಮಾರ್ಮಿಕವಾಗಿ ಖರ್ಗೆ ಮಾತನಾಡಿದರು. ಪಂಚ ರಾಜ್ಯಗಳ ಚುನಾವಣೆ ಹಾಗೂ ಕರ್ನಾಟಕದಲ್ಲಿ ಉಪ ಚುನಾವಣೆ ಮುಗಿದು ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಲ್ಲಿ ಕಳೆದೊಂದು ವಾರದಿಂದ ಚಟುವಟಿಕೆ ಗರಿಗೆದರಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಬಣದ ಸಚಿವರು, ಶಾಸಕರು ಹೇಳಿಕೆಗಳನ್ನು ನೀಡುತ್ತಾ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಮೇ 15ರೊಳಗೆ ಡಿ.ಕೆ ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಹೈಕಮಾಂಡ್ ಗಿಫ್ಟ್ ನೀಡುತ್ತದೆ ಎಂದು ಆಸೆಪಟ್ಟವರಿಗೆ ತಣ್ಣೀರೆರಚಿದಂತಾಗಿದೆ.
ಸಂಪೂರ್ಣ ಸಂಪುಟ ಬದಲಾವಣೆ?
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ಸಂಪುಟ ವಿಸ್ತರಣೆಯ ಚರ್ಚೆಯೂ ಜೋರಾಗಿದೆ. ಆದರೆ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ ಎಂದು ಖರ್ಗೆ ಹೇಳಿದ್ದರಿಂದ ಸಚಿವ ಸಂಪುಟ ಪುನರ್ ರಚನೆ ನಡೆಯಬಹುದೆಂಬ ಚರ್ಚೆ ಜೋರಾಗಿದೆ. ಅಲ್ಲದೆ, ಸಂಪೂರ್ಣವಾಗಿ ಸಚಿವ ಸಂಪುಟ ಬದಲಾಗಬಹುದು ಎನ್ನಲಾಗಿದೆ.
ಸಂಪುಟದ ಸುಮಾರು 30 ಸಚಿವರನ್ನು ಕೈಬಿಟ್ಟು 3-4 ಬಾರಿ ಶಾಸಕರಾಗಿರುವರಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಕ್ಷಿಗಳು ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿ ಒತ್ತಡ ಹಾಕುತ್ತಿದ್ದಾರೆ. ಹೈಕಮಾಂಡ್ ಹೊಸ ಮುಖಗಳಿಗೆ ಅವಕಾಶ ನೀಡುವ ಭರವಸೆ ನೀಡಿದೆ.ಇದನ್ನು ಓದಿ –IPL 2026: ಇ-ಸಿಗರೇಟ್ ಬಳಸುತ್ತಿದ್ದ ರಿಯಾನ್ ಪರಾಗ್‌ಗೆ ದಂಡ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ 30 ಸಚಿವರನ್ನು ಬದಲಾಯಿಸಬಹುದು ಮತ್ತು ಮುಂಬರುವ ಸಂಪುಟ ಪುನಾರಚನೆಯಲ್ಲಿ ಪ್ರಸ್ತುತ ಸಂಪುಟದ ನಾಲ್ವರು ಹಿರಿಯ ಸಚಿವರನ್ನು ಮಾತ್ರ ಉಳಿಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.








