By using this site, you agree to the Privacy Policy and Terms of Use.
Accept
VarthamanVarthamanVarthaman
Notification Show More
Font ResizerAa
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
    ArticlesShow More
    “ಸೂರ್ಯನಿಗೆ ಸವಾಲೆಸೆದವರು”
    May 3, 2026
    ಸ್ವಭಾವದ ಸ್ವರೂಪ
    May 3, 2026
    “ರೈಟ್ ಟು ಡ್ರೈ”
    May 3, 2026
    ಸುಡುವ ಸೂರ್ಯನಿಗೊಂದು ಪತ್ರ
    May 3, 2026
    “ಯಶಸ್ಸಿಗಿಂತ ಸಂಸ್ಕಾರ ದೊಡ್ಡದು”
    May 1, 2026
  • Sports
  • National
  • International
  • Crime
Reading: “ರೈಟ್ ಟು ಡ್ರೈ”
Share
Font ResizerAa
VarthamanVarthaman
  • Home
  • Karnataka
  • Articles
  • Sports
  • National
  • International
  • Crime
Search
  • Home
  • Karnataka
    • Bengaluru
    • Mandya
    • Mysore
    • Chikkamagaluru
  • Articles
  • Sports
  • National
  • International
  • Crime
Follow US
Varthaman > Karnataka – Latest Breaking News > Articles > “ರೈಟ್ ಟು ಡ್ರೈ”
Articles

“ರೈಟ್ ಟು ಡ್ರೈ”

Team Varthaman
Last updated: May 3, 2026 11:32 AM
Team Varthaman
Published: May 3, 2026
Share
SHARE


ನಮ್ಮ ಅಜ್ಜಿಯರ ಕಾಲದಿಂದ ನಮ್ಮವರೆಗೂ ನಮಗೆ ನಮ್ಮ ದೇಶಗಳಲ್ಲಿ ಬಟ್ಟೆ ಒಣಹಾಕುವುದು ಒಂದು ಸಂಭ್ರಮದ ಕಲೆಯೇ ಆಗಿತ್ತು. ಬೆಳಿಗ್ಗೆ ಎದ್ದು, ಬಟ್ಟೆ ಒಗೆದು, ಅಂಗಳದ ಹಗ್ಗದ ಮೇಲೆ ಸಾಲಾಗಿ ಹಾಕಿ,ಸುಡುವ ಬಿಸಿಲಿದ್ದರೆ, “ಆಹಾ, ಇವತ್ತು ಬಿಸಿಲು ಎಷ್ಟೊಂದು ಚೆನ್ನಾಗಿದೆ !” ಎನ್ನುತ್ತ ಉಲ್ಲಾಸ, ಉತ್ಸಾಹ ತೋರುತ್ತಲೋ, ಅದೇ ಮೋಡವಾಗಿದ್ದರೆ,”ಅಯ್ಯೋ…..ಏನಿವತ್ತು ಬಿಸಿಲೇ ಕಾಣೇ. ಸಂಜೆ ಹೊತ್ತಿಗೆ ಬಟ್ಟೆ ಒಣಗುವುದೋ ಇಲ್ಲವೋ”, ಎಂದು ಗೊಣಗಿಕೊಳ್ಳುತ್ತಲೋ,ಬಟ್ಟೆಯನ್ನು ಸಾಲಾಗಿ ಹಗ್ಗ ಅಥವಾ ತಂತಿಯ ಮೇಲೆ ಹರವಿ ಹಾಕುವುದು ನಮ್ಮಂಥ ಹೆಂಗಳೆಯರ ದಿನ ನಿತ್ಯದ ಕೈಂಕರ್ಯವಾಗಿತ್ತು.ಇತ್ತೀಚೆಗೆ ಬಹುಪಾಲು ಅದೆಲ್ಲಾ ಮನೆಕೆಲಸದವರು ಪಾಲೋ, ಇಲ್ಲಾ ವಾಶಿಂಗ್ ಮೆಶೀನುಗಳ ಪಾಲಾಗಿ ಗತಕಾಲದ ಈ ಕಾರ್ಯಕ್ರಮ ಗೃಹಿಣಿಯರ ಮೆನು ಕಾರ್ಡಿಂದ ಡಿಲೀಟ್ ಆಗೋಗಿದೆ ಅಂತಿಟ್ಕೊಳೀ!

ನಮ್ಮ ಅಮ್ಮ ಹಿಂದೆಲ್ಲಾ ಹೇಳುತ್ತಿದ್ದರು — “ಮಗಳೇ, ಬಿಸಿಲಿಗೆ ಒಣಗಿದ ಬಟ್ಟೆಯ ಪರಿಮಳವೇ ಬೇರೆ.ಸೂರ್ಯನ ಶಾಖದಲ್ಲಿ ಒಣಗಿದ ಗರಿಗರಿ ಬಟ್ಟೆ ಮಡಿಗೆ ಹಾಕಿದಷ್ಟೇ ಶ್ರೇಷ್ಠವಾಗುವುದು”ಎಂದು. ಅವರ ಮಾತು ಕೇಳಿ ಅಪ್ಪಿತಪ್ಪಿ ಅಮೆರಿಕದಲ್ಲಿ, ನಾವೇನಾದರೂ ಬಟ್ಟೆಯನ್ನ ಮನೆಯ ಹಿಂದೋ, ಮುಂದೋ ಒಣಹಾಕಿದ್ವಾ, ತಕೋಳ್ರಪ್ಪಾ, ಪೊಲೀಸ್ನೋರು ಹಿಂದೆಲೇ ಬಂದು ಕೈಕೋಳ ಹಾಕೋದೇ ಸೈ!

Join WhatsApp Group

“ಅಯ್ಯಾ, ಇದೆಂಥ ನ್ಯಾಯಾ? ನಮ್ಮ ಮನೆ, ನಮ್ಮ ಅಂಗಳ, ನಾವೇನಾದ್ರೂ ಮಾಡ್ಕೋತೀವಿ. ಅದನ್ನ ಕೇಳೋಕೆ ನೀವ್ಯಾರ್ರೀ……?”ಭಾರತದಲ್ಲಾಗಿದ್ರೆ, ಇದೇ ಬಹಳ ಸುಸಂಸ್ಕೃತವಾದ ಡೈಲಾಗ್. ಆದ್ರೆ, ಅಮೆರಿಕದಲ್ಲಿ, ಅದೆಲ್ಲಾ ನಡೆಯೋಲ್ಲ ಬಿಡಿ. “ಏ ರೂಲ್ ಇಸ್ ಎ ರೂಲ್ ಈವನ್ ಫಾರ್ ಎ ಫೂಲ್”, ಅನ್ನೋದು ಇಲ್ಲಿಯ ಪಾಲಿಸಿ!
ನಾನು ಮೂರು ವರ್ಷದ ಹಿಂದೆ ಅಮೆರಿಕಕ್ಕೆ ಬಂದಾಗ ಮಗನ ಮನೆಯಲ್ಲಿ ಬಟ್ಟೆ ಒಣಗಿಸುವ ಡ್ರೈಯರ್ ಕೆಟ್ಟುಹೋಗಿತ್ತು.ನಾನು,”ಅಯ್ಯಾ ಹೋಗ್ಲಿ ಬಿಡೋ. ನಿಮ್ಮನೆ ಹಿತ್ತಲು ಬೇಕಾದಷ್ಟು ದೊಡ್ಡದಿದೆ.ಇನ್ನು ಬಿಸಿಲಿಗಂತೂ ನಿಮ್ಮೂರಲ್ಲಿ ಬರವೇ ಇಲ್ಲ.. ಒಂದು ಹಗ್ಗ ತಗೊಂಡ್ ಬಾ. ಆ ಕಡೆಯಿಂದ ಈ ಕಡೆಗೆ ಕಟ್ಟಿ ಬಟ್ಟೇನ ಬಿಸಿಲಲ್ಲೇ ಒಣಗಿಸಿದ್ರಾಯ್ತು. ಬಟ್ಟೆ ಗರಿಗರಿಯಾಗಿ ಘಮ್ ಅಂತವೆ”, ಅಂದಿದ್ದೆ.

ಅವನೇನೋ,ನಾನು ಮಹಾ ಅಪರಾಧವೇ ಮಾಡಿಬಿಟ್ನೇನೋ ಅನ್ನುವಂತೆ,”ಅಯ್ಯಯ್ಯಪ್ಪಾ…ನಿಮ್ ದಮ್ಮಯ್ಯ! ಅಂತ ಕೆಲ್ಸ ಮಾತ್ರ ಮಾಡಕ್ಕೋಗಬೇಡಿ. ಇವತ್ತೋ ನಾಳೇಲೋ ರಿಪೇರಿ ಮಾಡೋರ್ನ ಕರಿಸ್ತೀನಿ”, ಅಂತ ಸಿಡಸಿಡ ಅಂದು ಆಫೀಸಿಗೆ ಬರಬರ ನಡೆದಿದ್ದ.ನಾನು,”ಎಲಾ ಇವನಾ?ಬಟ್ಟೆ ಹೊರಗೆ ಹರವಾಕ್ತೀನಿ ಅಂದ್ನಪ್ಪಾ! ಅದಕ್ಯಾಕ್ ಇವ ಹಿಂಗೆ ಹಾರಾಡ್ತಿದಾನೇ?ಇದ್ರಲ್ಲೇನಿದೆ ತಪ್ಪು ”, ಅಂತ ತಲೇನ ಪರಪರ ಕೆರಕೊಂಡ್ರೂ ಏನೂ ಹೊಳೀಲಿಲ್ಲ. ಅವ ಹಂಗೆ ಆಡಿದ್ದರ ಕಾರಣ, ಮೂರು ವರ್ಷ ಆದ ಮೇಲೆ ಯಾವುದೋ ಯೂ ಟ್ಯೂಬ್ ವಿಡಿಯೋ ನೋಡಿದಾಗ ತಿಳೀತು ಕಣ್ರೀ.

ಹೌದು, ನೀವು ಓದಿದ್ದು ಸರಿಯೇ. ಅಮೆರಿಕದ ಹಲವು ರಾಜ್ಯಗಳಲ್ಲಿ ಹೊರಗಡೆ ಬಟ್ಟೆ ಒಣಹಾಕುವುದು ನಿಷಿದ್ಧ! ಅಲ್ಲಿಯ Homeowners Association ಎಂಬ ಮಹಾನ್ ಸಂಸ್ಥೆ, ನೆರೆಹೊರೆಯ “ಸೌಂದರ್ಯ” ಕಾಪಾಡಲು ಈ ಕಾನೂನು ತಂದಿದೆ. ಅಂದರೆ, ನಿಮ್ಮ ಅಂಗಳದಲ್ಲಿ ತೂಗಾಡುವ ನಿಮ್ಮ ಚಡ್ಡಿ-ಲಂಗ ನೋಡಿ ಪಕ್ಕದ ಮನೆಯವರ ಮನಸ್ಸಿಗೆ ಖೇದವಾಗುವುದಂತೆ! ಅವರ ಮನಸ್ಸು, ಕಣ್ಣುಗಳು ಎಷ್ಟು ಸೂಕ್ಷ್ಮ ಎಂದರೆ, ಒಣಗಿ ಹಾಕಿರುವ ಬಟ್ಟೆ ನೋಡಲು ಆಗುವುದಿಲ್ಲ — ಆದರೆ ಬಟ್ಟೆ ಇಲ್ಲದ ಅರೆನಗ್ನರನ್ನ ಆನಂದದಿಂದ ನೋಡಬಲ್ಲರು! ಇದಲ್ಲವೇ ವಿಪರ್ಯಾಸ? ಇಲ್ಲಿ ಒಣಗಲು ಹಾಕಿದ ಬಟ್ಟೆ ನೋಡಲು “ಅಸಭ್ಯ”, ಆದರೆ ಬಿಕಿನಿ, ಮೂರಿಂಚಿನ ಚಡ್ಡಿ, ಕಾಸಗಲದ ಕಂಚುಕಗಳು ಎಲ್ಲೆಡೆ ರಾರಾಜಿಸುತ್ತವೆ!

Join WhatsApp Group

ಸ್ವಿಟ್ಜರ್ಲೆಂಡ್‌ನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅಲ್ಲಿ ಭಾನುವಾರ ಬಟ್ಟೆ ಒಣಹಾಕುವಂತಿಲ್ಲ. ಏಕೆಂದರೆ ಅದು ದೇವರ ದಿನ. ದೇವರಿಗೂ ನಿಮ್ಮ ಒದ್ದೆ ಪಂಚೆ, ಚಡ್ಡಿ, ಬನಿಯನ್ನು,ಮುಂತಾದವುಗಳನ್ನ ನೋಡಲು ಇಷ್ಟವಿಲ್ಲ ಎಂದು ಕಾಣುತ್ತದೆ! ಇಷ್ಟೇ ಅಲ್ಲ, ಮನೆ ಮುಂದಿನ ಹುಲ್ಲು ಕತ್ತರಿಸಬಾರದು, ಬಟ್ಟೆ ಒಣಹಾಕಬಾರದು, ಗಲಾಟೆ ಮಾಡಬಾರದು — ಇನ್ನು ಭಾನುವಾರ ಏನು ಮಾಡಬೇಕು ಎಂದು ಕೇಳಿದರೆ, “ತೆಪ್ಪಗೆ ಗುಂಡು ಹಾಕಿ ರಜೆ ದಿನವನ್ನ ಮಜಾ ಮಾಡಿ ಅಥವಾ ಸುಮ್ಮನೆ ಊರೆಲ್ಲಾ ಗಿರಗಿರನೆ ಸುತ್ತಿ ಬನ್ನಿ” ಎನ್ನುತ್ತಾರೆ. ಸರಕಾರಿ ನಿಯಮದಿಂದ ಸ್ವಿಸ್ ಜನ ಎಂತಹ ಸಂತೋಷದ ಜೀವನ ನಡೆಸುತ್ತಾರೆ ಅಲ್ಲವೇ?

ಬಟ್ಟೆ ಒಣಹಾಕುವ ವಿಷಯದಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಹಲವು ರೀತಿಯ ನಿಯಮಗಳಿವೆ. ಇದು ತುಂಬಾ ಆಸಕ್ತಿಕರ ವಿಷಯ! ಕೆನಡಾದ Nova Scotia ಪ್ರಾಂತ್ಯ ೨೦೧೦ರಲ್ಲಿ “ಬಟ್ಟೆಯ ಹರಡುವ ಹಗ್ಗದ ನಿಷೇಧವನ್ನು ತಡೆಯುವ ಕಾಯ್ದೆ” ಅಂಗೀಕರಿಸಿ, ಮಾಲೀಕರು ಬಟ್ಟೆ ಒಣಗಿಸಲು ಅನುಮತಿ ನೀಡಿದೆ.

ಅನೇಕ ಯುರೋಪಿಯನ್ ದೇಶಗಳ ಅಪಾರ್ಟ್‌ಮೆಂಟ್‌ಗಳಲ್ಲಿ ಬಾಲ್ಕನಿಯಲ್ಲಿ ಬಟ್ಟೆ ಒಣಹಾಕುವುದನ್ನು ನಿವಾಸ ನಿಯಮಗಳ ಮೂಲಕ ನಿರ್ಬಂಧಿಸಲಾಗಿದೆ .ಪ್ರಮುಖವಾಗಿ ಐತಿಹಾಸಿಕ ಪ್ರದೇಶಗಳಲ್ಲಿ ಮತ್ತು ಪ್ರವಾಸಿ ಕೇಂದ್ರಗಳಲ್ಲಿ.
“ಸೌಂದರ್ಯ ದೃಷ್ಟಿ”ಯ ಹೆಸರಿನಲ್ಲಿ ಬಟ್ಟೆ ಒಣಹಾಕುವ ನಿಷೇಧ ಮುಖ್ಯವಾಗಿ ಶ್ರೀಮಂತ ಪಾಶ್ಚಾತ್ಯ ದೇಶಗಳಲ್ಲಿ ಕಂಡುಬರುತ್ತದೆ . ಭಾರತ, ಇಟಲಿ, ಸ್ಪೇನ್‌ನಂಥ ದೇಶಗಳಲ್ಲಿ ಇದು ಸಹಜ ಮತ್ತು ಸ್ವಾಭಾವಿಕ ಚಟುವಟಿಕೆ.
ಆದೇ, ಇತ್ತ ನಮ್ಮ ಭಾರತದಲ್ಲಿ ನೋಡಿ, ಬಟ್ಟೆ ಒಣಹಾಕಲು ಅಂಗಳ ಸಾಲದೆ ಕಿಟಕಿ, ಕಂಬಿ, ಮಾಡಿನ ಹೆಂಚು, ಪಕ್ಕದ ಮನೆಯ ಕಾಂಪೌಂಡು, ಎದುರು ಮನೆಯ ಗೋಡೆ, ಹಿಂದಿನ ಮನೆಯ ಮರ ಗಿಡ —ಏನಿದ್ದರೂ, ಎಲ್ಲವನ್ನೂ ಬಳಸುತ್ತೇವೆ. ಅಪಾರ್ಟ್‌ಮೆಂಟ್‌ನ ಬಾಲ್ಕನಿಯಲ್ಲಿ ಸೀರೆ, ಶರ್ಟು, ಟವೆಲ್ ….ಒಂದು ಮಿನಿ ಬಟ್ಟೆ ಅಂಗಡಿಯ ಶೋಕೇಸು ತೆರೆದಿಟ್ಟಂತೆ ಭಾಸವಾಗುತ್ತದೆ. ಬಟ್ಟೆಗಳನ್ನು ಒಣಹಾಕಿದಾಗ, ಗಾಳಿಯಲ್ಲಿ ಲಯಬದ್ಧವಾಗಿ ಹಾರಾಡುವ ಬಣ್ಣ ಬಣ್ಣದ ಸೀರೆಗಳು, ಪಂಚೆಗಳು ನೋಡುವುದೇ ಕಣ್ಣಿಗೆ ಚಂದ. ಅದೊಂದು ಸುಂದರ ದೃಶ್ಯಕಾವ್ಯವೇ ಸರಿ! ನಾವು ಇದನ್ನು “ಅಸ್ಥಿರ ಕಲೆ” ಎಂದು ಪರಿಗಣಿಸುತ್ತೇವೆ — ಗಾಳಿಗೆ ತೂಗಾಡುವ ಬಣ್ಣಬಣ್ಣದ ಬಟ್ಟೆಗಳು ನಮ್ಮ ಜೀವಂತಿಕೆಯ ಸಂಕೇತ!ಆ ಮನೆಯಲ್ಲಿ ಸಂಸಾರವಿದೆ ಎಂದು ರಂಗು ರಂಗಿನ ವಸ್ತ್ರಗಳ ಮೂಲಕ ತೋರಿಸುವ ಗುರುತು!ನಮ್ಮ ಮನೆಗಳ ಅಂಗಳದಲ್ಲಿ ಬಟ್ಟೆ ಕಾಣದಿದ್ದರೆ,”ಓಹೋ… ಮನೆಯಲ್ಲಿ ಯಾರೂ ಇಲ್ಲವೆಂದು ಕಾಣ್ತದೆ”, ಎಂದು ಕಳ್ಳಕಾಕರು ಮನೆ ದೋಚಲು ಪ್ಲಾನ್ ಕೂಡಾ ಮಾಡುವುದು ಸಹಜ! ಅಲ್ವಾ? ಬಟ್ಟೆ ನಮ್ಮ ಮಾನದ ರಕ್ಷಣೆಯ ಜೊತೆಗೆ ನಮ್ಮ ಮನೆಯ ರಕ್ಷಣೆಯನ್ನೂ ಮಾಡುವುದಾದರೆ, ಬಟ್ಟೆ ಒಣಹಾಕುವುದರಲ್ಲಿ ತಪ್ಪೇನಿದೆ? ಅಲ್ವಾ?

Join WhatsApp Group

ಆದರೆ ಅಮೆರಿಕದಲ್ಲಿ? ಅಲ್ಲಿ ಈ “ಸಾಮಾನ್ಯ” ಕೆಲಸಕ್ಕೇ ದಂಡ ತೆರಬೇಕಾದ ಪರಿಸ್ಥಿತಿ ಬಂದಿದೆ! ಬಟ್ಟೆ ಒಣಹಾಕಲು ಕಾನೂನಿನ ಅನುಮತಿ ಪಡೆಯಬೇಕಾಗಿದೆ ಮತ್ತು ಅದಕ್ಕಾಗಿ “Right to Dry” ಎಂಬ ವಿಚಿತ್ರ ಎನಿಸುವ ಚಳವಳಿಯೇ ಹುಟ್ಟಿಕೊಂಡಿದೆ! ಓದುತ್ತಿರುವ ನೀವು ಹಣೆಗೆ ಕೈ ಇಟ್ಟುಕೊಳ್ಳಲು ಸಿದ್ಧರಾಗಿ…

೧೯೩೦ರ ದಶಕದಲ್ಲಿ ಅಮೆರಿಕಕ್ಕೆ ವಿದ್ಯುತ್ ಚಾಲಿತ ಡ್ರೈಯರ್ ಯಂತ್ರ ಲಗ್ಗೆ ಇಟ್ಟಿತು. “ಹೊಸ ಯುಗ ಬಂತು! ಮಾನವ ಬಿಡುಗಡೆ ಆದ!” ಎಂದು ಜಾಹೀರಾತುದಾರರು ಕೂಗಿದರು. ಎರಡನೇ ಮಹಾಯುದ್ಧದ ನಂತರ “Live Better Electrically” ಎಂಬ ಪ್ರಚಾರ ನಡೆಯಿತು. ಅದರ ಅಂತರಾರ್ಥ ಸರಳವಾಗಿತ್ತು: “ವಿದ್ಯುತ್ ಬಳಸಿ, ಆಧುನಿಕರಾಗಿ!”
ಕ್ರಮೇಣ ಅಲ್ಲಿ ಒಂದು ವಿಚಿತ್ರ ಮನೋಭಾವ ಬೆಳೆಯಿತು — ಬಿಸಿಲಿಗೆ ಬಟ್ಟೆ ಒಣಹಾಕುವವರು “ಬಡವರು” ಎಂಬ ಹಣೆಪಟ್ಟಿ! ಡ್ರೈಯರ್ ಇಟ್ಟುಕೊಂಡವರು “ಪ್ರತಿಷ್ಠಿತರು” ಎಂಬ ಅಹಂ! ಉಚಿತ ಸೌರಶಕ್ತಿ ಬಳಸುವವನು ದರಿದ್ರ; ಹಣ ತೆತ್ತು ವಿದ್ಯುತ್ ವ್ಯಯಿಸುವವನು ಶ್ರೀಮಂತ! ಎಂಥ ವಿಪರ್ಯಾಸ ಅಲ್ಲವೇ?

ಅಮೆರಿಕದಲ್ಲಿ HOA (Homeowners Association) ಎಂಬ ಒಂದು ವ್ಯವಸ್ಥೆ ಇದೆ. ಅಲ್ಲಿ ಸುಮಾರು ೨.೫ ಲಕ್ಷ ಇಂತಹ ಸಂಘಗಳಿದ್ದು ೬ ಕೋಟಿ ಜನರ ಬದುಕನ್ನು ನಿಯಂತ್ರಿಸುತ್ತವೆ. ಮನೆಯ ಮುಂಭಾಗ ಹೇಗಿರಬೇಕು, ಮನೆಗೆ ಯಾವ ಬಣ್ಣ ಹಚ್ಚಬೇಕು, ಮನೆಯ ಮುಂದೆ ಯಾವ ಮರ ನೆಡಬೇಕು,ಗಿಡಗಳ ಬಣ್ಣ ನಿರ್ದಿಷ್ಟವಾಗಿರಬೇಕು, ಆ ಮರಗಳಿಗೆ ಎಷ್ಟು ಗ್ಯಾಲನ್ ನೀರು ಬೇಕೂ? ಕಸದ ಪ್ರಮಾಣ ಎಷ್ಟಿರಬೇಕು? — ಇವೆಲ್ಲ ಇವರೇ ತೀರ್ಮಾನಿಸುತ್ತಾರೆ!
ಅದರಲ್ಲಿ ಬಟ್ಟೆ ಒಣಹಾಕುವ ಹಗ್ಗ ಕಟ್ಟುವುದನ್ನೂ ನಿಷೇಧಿಸಿದರು. ಅದಕ್ಕೆ ಅವರು ಕೊಟ್ಟ ಕಾರಣಗಳು ಎರಡು:
“ಅಕ್ಕಪಕ್ಕದ ಮನೆಯವರಿಗೆ ನಿಮ್ಮ ಒಳಉಡುಪು ಕಾಣಿಸಿದರೆ ಅಸಹ್ಯ!”

“ಹೊರಗೆ ಹಗ್ಗ ಕಟ್ಟಿದರೆ ಬಡಾವಣೆಯ ಆಸ್ತಿ ಮೌಲ್ಯ (Property Value) ಕಡಿಮೆ ಆಗುತ್ತದೆ!”
ನಮ್ಮ ಭಾರತೀಯರಾಗಿದ್ದರೆ: “ಅರೆರೆರೆರೇ,ಇದ್ಯಾವ ಸೀಮೆ ರೂಲಿಸ್ ಕಣ್ರೀ? ಬಿಸಿಲಿಗೆ ಒಣಗಿದ ಬಟ್ಟೆಯ ಆ ತಾಜಾ ವಾಸನೇನ ಒಂದು ಸಾರಿಯಾದ್ರೂ ಮೂಸಿ ನೋಡ್ರೀ….. ಮನೆ ಮುಂದೆ ಬಟ್ಟೆ ಒಣ ಹಾಕಲು ಜಾಗ ಇದ್ದಷ್ಟೂ, ಮನೆಯ ಮೌಲ್ಯವೇ ಹೆಚ್ಚಾಗುತ್ತೆ ಮಾರ್ರೇ….!”ಅಂತ ಮೂಗು ಮುರಿಯುತ್ತಿದ್ದರು.

Join WhatsApp Group

ಈ ವಿಷಯ ಎಷ್ಟು ಗಂಭೀರವಾಯಿತೆಂದರೆ “Drying for Freedom” ಎಂಬ ಒಂದು ಸಾಕ್ಷ್ಯಚಿತ್ರವೇ ತಯಾರಾಯಿತು. ಬಟ್ಟೆ ಒಣಗಿಸುವ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕಥೆ ಅದು! ಒಬ್ಬ ಮಹಿಳೆ HOA ಒಪ್ಪಿಗೆ ಇಲ್ಲ ಎಂಬ ಕಾರಣಕ್ಕೆ ಒಳ್ಳೆಯ ಮನೆಯೊಂದನ್ನು ಕೊಳ್ಳಲು ನಿರಾಕರಿಸಿದರು. ಕಾರಣ? ಅಲ್ಲಿ ಹಗ್ಗ ಕಟ್ಟಲು ಅನುಮತಿ ಇರಲಿಲ್ಲ! ಮತ್ತೊಬ್ಬರು ಕೇಳಿದರು: “ನಮ್ಮ ತಾತ-ಅಜ್ಜಿಯರಿಗೆ ಇದನ್ನು ಕೇಳಿಸಿದರೆ ತಲೆ ತಿರುಗುತ್ತಿತ್ತು — ಬಿಸಿಲಿಗೆ ಬಟ್ಟೆ ಹಾಕುವುದಕ್ಕೂ ಕಾನೂನು ಬೇಕೇ?”
ಒಂದು ಡ್ರೈಯರ್ ಯಂತ್ರ ಒಂದು ಸುತ್ತು ಬಟ್ಟೆ ಒಣಗಿಸಿದಾಗ ಸುಮಾರು ೨ ಕೆ.ಜಿ. ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತದೆ! ಬಿಸಿಲಿನಲ್ಲಿ ಒಣಗಿಸಿದರೆ? ಶೂನ್ಯ ಪರಿಸರ ಹಾನಿ!ಖರ್ಚಿನ ಲೆಕ್ಕ ಹಾಕಿದಾಗ, ಒಂದು ಹಗ್ಗ ಮತ್ತು ಒಂದಷ್ಟು ಕ್ಲಿಪ್‌, ಒಂದು ಸುತ್ತಿಗೆಗೆ ಕೇವಲ ೨೦ ಡಾಲರ್ ಖರ್ಚಾದರೆ, ಡ್ರೈಯರ್ ನಿರ್ವಹಣೆಗೆ ೨೦೦ ಡಾಲರ್ ಬೇಕು!ಅದು ಸಾಲದೆಂಬಂತೆ,ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು ೨,೯೦೦ ಡ್ರೈಯರ್ ಬೆಂಕಿ ಅಪಘಾತಗಳಾಗಿ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಅಂಗಳದಲ್ಲಿ ಕಟ್ಟಿದ ಹಗ್ಗ ಎಂದೂ ಮನೆ ಸುಟ್ಟ ಉದಾಹರಣೆ ಇಲ್ಲ!ಅದು ನಮ್ಮ ಪುಕ್ಕಟೆ ಆಪ್ತ ರಕ್ಷಕ!
Alexander Lee ಎಂಬ ಪರಿಸರ ಹೋರಾಟಗಾರ ಈ ವ್ಯವಸ್ಥೆ ವಿರುದ್ಧ ದನಿ ಎತ್ತಿದರು. ಇದರ ಫಲವಾಗಿ ಫ್ಲೋರಿಡಾ ಮೊದಲ ಬಾರಿಗೆ ಈ ಹಕ್ಕನ್ನು ಮಾನ್ಯ ಮಾಡಿತು. ಇಂದು ಕ್ಯಾಲಿಫೋರ್ನಿಯಾ, ಟೆಕ್ಸಾಸ್ ಸೇರಿದಂತೆ ೧೯ ರಾಜ್ಯಗಳಲ್ಲಿ ಈ ಕಾನೂನು ಇದೆ. ಕೆಲವು ರಾಜ್ಯಗಳು ಇದನ್ನು “Solar Access Laws” (ಸೌರಶಕ್ತಿ ಬಳಕೆ ಹಕ್ಕು) ಅಡಿ ತಂದಿವೆ.ಬಿಟ್ಟಿಯಾಗಿ ಬಿಸಿಲಿಗೆ ಬಟ್ಟೆ ಒಣಗಿಸುವುದೂ ಒಂದು ಸೌರಶಕ್ತಿಯ ಬಳಕೆ ಎಂಬುದು ಎಷ್ಟು ಅರ್ಥಪೂರ್ಣ ಜಾಣತನ ಅಲ್ವಾ?

ನಮ್ಮ ಅಂಗಳದಲ್ಲಿ ಹಾರಾಡುವ ಬಟ್ಟೆಗಳಲ್ಲಿ ಒಂದು ದೊಡ್ಡ ಜೀವನ ತತ್ವ ಅಡಗಿತ್ತು — ಅದು ಪ್ರಕೃತಿಯ ಜೊತೆಗಿಸಹಬಾಳ್ವೆ. ಅದನ್ನು “ಹಳೆಯ ಕಾಲದ ಬಡತನ” ಎಂದು ಅಮೆರಿಕ ತಿರಸ್ಕರಿಸಿ ಯಂತ್ರಕ್ಕೆ ಮಾರುಹೋದರು. ಪರಿಸರ ಹಾಳಾದ ಮೇಲೆ, ಜೇಬು ಖಾಲಿಯಾದ ಮೇಲೆ ಅವರಿಗೆ ಮತ್ತೆ ಪ್ರಕೃತಿಯ ಅರಿವಾದೀತು.

ನಮ್ಮ ದೇಶದಲ್ಲೂ ಈಗ ಕಾಂಕ್ರೀಟ್ ಕಾಡುಗಳು ಬೆಳೆಯುತ್ತಿವೆ. ಬಟ್ಟೆ ಒಣಹಾಕಲು ಜಾಗವಿಲ್ಲದೆ ಜನರು ಪರದಾಡುತ್ತಿದ್ದಾರೆ. ನಮ್ಮ ಅಂಗಳದ ಹಗ್ಗ — ಅದು ನಮ್ಮ ಪರಂಪರೆಯ ಒಂದು ಸಣ್ಣ ಕೊಂಡಿ ಇದ್ದಂತೆ. ಅದನ್ನು ತುಂಡರಿಸಿದರೆ, ನಮ್ಮ ನೆಲ-ಜಲ-ಗಾಳಿಯ ಜೊತೆಗಿನ ನಂಟೂ ಕಡಿದುಹೋಗುತ್ತದೆ.

Join WhatsApp Group

ಕೊನೆಯ ಮಾತು: ಅಂಗಳ ಇರುವವರೆಗೆ ಹಗ್ಗ ಕಟ್ಟಿ, ಬಿಸಿಲಿಗೆ ಬಟ್ಟೆ ಒಣಹಾಕಿ. ಅದು ಬರೀ ಹಕ್ಕಲ್ಲ — ಅದು ನಾವು ಪ್ರಕೃತಿಗೆ ನೀಡುವ ಗೌರವ!ಪ್ರಕೃತಿಯನ್ನು ಆಪ್ತವಾಗಿ ಬಳಸಿಕೊಳ್ಳುವ ಒಂದು ಮಾರ್ಗ!ಭೂಗೋಳಕ್ಕೆ ನಾವು ನೀಡುವ ಕೊಡುಗೆ ಕೂಡಾ!
ಆದರೆ ಇನ್ನು ಮುಂದೆ ವಿದೇಶ ಪ್ರವಾಸಕ್ಕೆ ಹೋದಾಗ, ಆ ದೇಶದ ನಿಯಮಗಳನ್ನ ತಿಳಿಯದೇ ಅಪ್ಪಿತಪ್ಪಿ ಹೋಟೆಲ್ ಕಿಟಕಿಯಲ್ಲಿ ಬನಿಯನ್, ಚಡ್ಡಿ, ಒಳಉಡುಪುಗಳು ಅಷ್ಟೇ ಅಲ್ಲಾ ಏನೇ ಒಣಹಾಕಿಬಿಟ್ಟೀರೀ! ಜಾಗ್ರತೆ! ಬಟ್ಟೆ ಒಣಗುವ ಮೊದಲೇ ನಿಮ್ಮ ಕೈಗಳಿಗೆ ಕೋಳ ಬಿದ್ದಿರುತ್ತದೆ. ಬಟ್ಟೆ ತೂಗಾಡಿಸಿದ ಅಪರಾಧಕ್ಕೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಾಗಬಹುದು!ಏಕೆಂದರೆ,”Ignorence of law is not an excuse “ಕಾನೂನಿನ ಅಜ್ಞಾನವು ನೆಪವಾಗಲಾರದು! ವಂದನೆಗಳು.

ರೂಪ ಮಂಜುನಾಥ
ಹೊಳೆನರಸೀಪುರ

  • “ಸೂರ್ಯನಿಗೆ ಸವಾಲೆಸೆದವರು”
    by Team Varthaman
  • ಸ್ವಭಾವದ ಸ್ವರೂಪ
    by Team Varthaman
  • “ರೈಟ್ ಟು ಡ್ರೈ”
    by Team Varthaman
  • ಸುಡುವ ಸೂರ್ಯನಿಗೊಂದು ಪತ್ರ
    by Team Varthaman
  • ಗಂಡು ಮಗುವಿಗೆ ಜನ್ಮ ನೀಡಿದ ಡಾಲಿ ಧನಂಜಯ್–ಧನ್ಯತಾ ದಂಪತಿ
    by Team Varthaman
ಹತ್ತೂರಿನ ಸುಗ್ಗಿ ನೋಡುವ ಮೊದಲು ಹೆತ್ತೂರಿನ ಸುಗ್ಗಿ ನೋಡು
ಮತ್ತೇ ಬರಲಿ ಆ ಕಾಲ
ಭಾವುಕತೆಗೆ ಬಲವಾಗಿ ನಿಲ್ಲುವ ಗಳಿಗೆಗಳು.
ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು
ದೇಹದಲ್ಲಿ ವಿಟಮಿನ್ D ಕೊರತೆ ಲಕ್ಷಣಗಳು ಪರಿಹಾರಗಳು
TAGGED:Kannada ArticleRight to dry
Share This Article
Facebook Email Print
Leave a Comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
XFollow
YoutubeSubscribe
TelegramFollow

Weekly Newsletter

Subscribe to our newsletter to get our newest articles instantly!
[mc4wp_form]
Popular News
Latest NewsTrending

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ: 110 ಪ್ರಯಾಣಿಕರ ದುರ್ಮರಣ

Team Varthaman
Team Varthaman
June 12, 2025
ಕಲ್ಪತರು ದಿನ
ಮೈಸೂರಲ್ಲಿ ಲಾರಿ ಸಂಚಾರ ಬಂದ್
ವಿದ್ಯುತ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ
ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಶಂಕಿತ ಉಗ್ರನ ಸಾವು
- Advertisement -
Ad imageAd image
Global Coronavirus Cases

Confirmed

0

Death

0

More Information:Covid-19 Statistics

Categories

  • Articles
  • Sports
  • Latest News
  • Karnataka News

About US

Since its inception in 1957, Varthamana has stood tall as one of the most trusted and respected Kannada daily newspapers. With deep roots in the rich cultural landscape of Karnataka, Varthamana continues to be the voice of the people, championing truth, transparency, and the values that define the region. Established with a strong commitment to ethical journalism, our newspaper has consistently provided comprehensive coverage, authentic news, and insightful editorials for over six decades. Today, under the dynamic leadership of Editor K. N. Ravi, Varthamana shines even brighter, blending a proud heritage with a modern outlook to meet the evolving needs of readers across the state. Our presence in the digital space, through Varthamana Digital, ensures that our trusted news and regional stories reach a wider audience faster and with greater impact.

Contact Us

© Varthaman. All Rights Reserved.
Welcome Back!

Sign in to your account

Username or Email Address
Password

Lost your password?