ಯಶಸ್ಸು ಎಂಬುದು ಕೇವಲ ಅದೃಷ್ಟವಲ್ಲ,ಅದು ಅಪಮಾನಗಳನ್ನು ಸಹಿಸಿ ಮೌನವಾಗಿ ಕಟ್ಟುವ ಸಾಮ್ರಾಜ್ಯ ಎಂಬ ಸತ್ಯಕ್ಕೆ ನಟ ವಿಜಯ್ ಅವರ ಜೀವನವೇ ಸಾಕ್ಷಿ.ಇಂದು ಕೋಟ್ಯಂತರ ಜನರನ್ನು ಸೆಳೆಯುವ ಅವರ ಪ್ರತಿಯೊಂದು ನಡೆಯೂ ಇಂದಿನ ಯುವ ಪೀಳಿಗೆಗೆ ಒಂದು ಸ್ಫೂರ್ತಿಯ ಪಾಠ.
ವಿಜಯ್ ಚಿತ್ರರಂಗಕ್ಕೆ ಕಾಲಿಟ್ಟಾಗ ಅವರಿಗೆ ಸಿಕ್ಕಿದ್ದು ಕೆಂಪು ಹಾಸಿನ ಸ್ವಾಗತವಲ್ಲ,ಬದಲಿಗೆ ಕಟುವಾದ ಟೀಕೆಗಳು. ಅವರ ರೂಪದ ಬಗ್ಗೆ ಹೀಯಾಳಿಸಿದವರೇ ಹೆಚ್ಚು.ಆದರೆ ಅವರು ಧೃತಿಗೆಡಲಿಲ್ಲ.ಜಗತ್ತು ನಿಮ್ಮನ್ನು ತಿರಸ್ಕರಿಸಿದಾಗ ಕುಗ್ಗುವ ಬದಲಿಗೆ,ಆ ಟೀಕೆಗಳನ್ನೇ ಇಂಧನವಾಗಿಸಿಕೊಂಡು ನಿಮ್ಮನ್ನು ನೀವು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ವಿಜಯ್ ತೋರಿಸಿಕೊಟ್ಟಿದ್ದಾರೆ.
ಸಿನಿಮಾ ಜೀವನದಲ್ಲಿ ಸಾಲು ಸಾಲು ಸೋಲುಗಳು ಎದುರಾದಾಗ ವಿಜಯ್ ಸೋಲೊಪ್ಪಿಕೊಳ್ಳಲಿಲ್ಲ. ಬದಲಾಗಿ,ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಅಪ್‌ಡೇಟ್ ಮಾಡಿಕೊಂಡರು. ನೃತ್ಯ,ನಟನೆ ಮತ್ತು ಶಿಸ್ತಿನ ಮೂಲಕ ತಮ್ಮದೇ ಆದ ಬ್ರ್ಯಾಂಡ್ ಸೃಷ್ಟಿಸಿದರು.ನಿಮ್ಮ ಮೌನ ಶತ್ರುಗಳನ್ನು ಕಾಡಲಿ,ನಿಮ್ಮ ಗೆಲುವು ಅವರಿಗೆ ಉತ್ತರಿಸಲಾಗದ ಪ್ರಶ್ನೆಯಾಗಲಿ ಎಂಬ ತತ್ವ ಅವರ ಯಶಸ್ಸಿನ ಗುಟ್ಟು.
ಬೆಳ್ಳಿತೆರೆಯ ನಾಯಕನಾಗಿ ಉಳಿಯದೆ,ಜನರ ನೋವಿಗೆ ಸ್ಪಂದಿಸಲು ರಾಜಕೀಯ ಅಖಾಡಕ್ಕೆ ಇಳಿದಿರುವುದು ಅವರ ಜೀವನದ ದೊಡ್ಡ ಕ್ರಾಂತಿ.ತಮಿಳಗ ವೆಟ್ರಿ ಕಳಗಂ ಮೂಲಕ ಅವರು ಹೊಸ ಸಂಚಲನ ಮೂಡಿಸಿದ್ದಾರೆ. ಕೇವಲ ಅಧಿಕಾರಕ್ಕಾಗಿ ಅಲ್ಲದೆ, ಬದಲಾವಣೆಗಾಗಿ ಅಖಾಡಕ್ಕೆ ಇಳಿಯುವ ಅವರ ಧೈರ್ಯ ಯುವಜನತೆಗೆ ನಾಯಕತ್ವದ ಗುಣಗಳನ್ನು ಕಲಿಸುತ್ತದೆ.
ಎಷ್ಟೇ ದೊಡ್ಡ ಸ್ಟಾರ್ ಆದರೂ ವಿಜಯ್ ಅವರ ಸರಳತೆ ಮಾದರಿ. ಅತಿಯಾದ ಪ್ರಚಾರಕ್ಕಿಂತ ಗುಣಮಟ್ಟದ ಕೆಲಸಕ್ಕೆ ಒತ್ತು ನೀಡುವುದು ಅವರ ಶೈಲಿ. ಮೌನವಾಗಿ ಶ್ರಮವಹಿಸಿದರೆ ಜಗತ್ತೇ ನಿಮ್ಮತ್ತ ತಿರುಗಿ ನೋಡುತ್ತದೆ ಎಂಬುದಕ್ಕೆ ಅವರೇ ಉದಾಹರಣೆ.
ನಿಮ್ಮ ಮೇಲೆ ಎಸೆಯಲ್ಪಟ್ಟ ಪ್ರತಿಯೊಂದು ಕಲ್ಲನ್ನು ನಿಮ್ಮ ಯಶಸ್ಸಿನ ಕೋಟೆಯ ಇಟ್ಟಿಗೆಯನ್ನಾಗಿ ಮಾಡಿಕೊಳ್ಳಿ. ನೆನಪಿಡಿ.

ಡಾ.ಸುಧಾಕರ.ಜಿ.ಲಕ್ಕವಳ್ಳಿ.








