ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ಈಗ ಮಹತ್ವದ ಹಂತಕ್ಕೆ ತಲುಪಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ (ಶ್ರೀಕಿ) ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ.
ಬಂಧಿತ ಶ್ರೀಕಿ ಮತ್ತು ಮಹಮ್ಮದ್ ನಲಪಾಡ್ ನಡುವೆ ನಿಕಟ ಸಂಪರ್ಕವಿತ್ತು ಎಂಬ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರದ ಇ-ಪ್ರೊಕ್ಯೂರಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿ, ಹಣವನ್ನು ಅಕ್ರಮ ಖಾತೆಗಳಿಗೆ ವರ್ಗಾಯಿಸಿದ ಪ್ರಕರಣದಲ್ಲಿ ಶ್ರೀಕಿ ತಂಡದ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣವನ್ನು ಸಿಐಡಿ ಎಸ್‌ಐಟಿ ತನಿಖೆಗೆ ವಹಿಸಲಾಗಿದ್ದು, ತನಿಖೆ ವೇಳೆ ಹಲವು ಡಿಜಿಟಲ್ ವ್ಯಾಲೆಟ್‌ಗಳ ದುರುಪಯೋಗ ಬೆಳಕಿಗೆ ಬಂದಿತ್ತು.
ಈ ಪ್ರಕರಣದಲ್ಲಿ ನಲಪಾಡ್‌ಗೆ ಸಂಬಂಧಿಸಿದ ಸಂಪರ್ಕಗಳ ಬಗ್ಗೆ ಈಗಾಗಲೇ ತನಿಖೆ ನಡೆದಿದ್ದು, ಅವರು ಎರಡು ಬಾರಿ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದೀಗ ಇಡಿ ಅಧಿಕಾರಿಗಳು ಶ್ರೀಕಿಯನ್ನು ಬಂಧಿಸಿರುವ ಹಿನ್ನೆಲೆಯಲ್ಲಿ, ಅಕ್ರಮ ಹಣ ವರ್ಗಾವಣೆಯಲ್ಲಿ ನಲಪಾಡ್ ಪಾತ್ರದ ಕುರಿತು ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.
ಹಿಂದಿನ ಪ್ರಕರಣದಲ್ಲಿ, 2024ರ ಏಪ್ರಿಲ್‌ನಲ್ಲಿ ಶಾಸಕ ಹ್ಯಾರಿಸ್ ಹಾಗೂ ನಲಪಾಡ್ ನಿವಾಸಗಳ ಮೇಲೆ ಇಡಿ ಸುದೀರ್ಘ ದಾಳಿ ನಡೆಸಿತ್ತು. ಶ್ರೀಕಿ ಹ್ಯಾಕ್ ಮಾಡಿದ ಬಿಟ್‌ಕಾಯಿನ್‌ಗಳನ್ನು ಕ್ರಿಪ್ಟೋ ಮೂಲಕ ಹಣವಾಗಿ ಪರಿವರ್ತಿಸಿ ಲೇಯರಿಂಗ್ ವಿಧಾನದಲ್ಲಿ ವರ್ಗಾಯಿಸಿದ ಆರೋಪ ಅಂದೇ ಹೊರಬಂದಿತ್ತು. ಶ್ರೀಕಿ ಮತ್ತು ನಲಪಾಡ್ ಸಹೋದರರ ನಡುವೆ ಹಳೆಯ ಪರಿಚಯವೂ ಇದ್ದದ್ದು ತನಿಖೆಯಲ್ಲಿ ಬಹಿರಂಗವಾಗಿತ್ತು.
ಶ್ರೀಕಿ ಬಂಧನದೊಂದಿಗೆ ಈ ಪ್ರಕರಣ ಮತ್ತೊಮ್ಮೆ ಚುರುಕುಗೊಂಡಿದ್ದು, ತನಿಖೆಯಲ್ಲಿ ಹೊರಬರುವ ಮಾಹಿತಿಗಳು ರಾಜಕೀಯ ವಲಯದಲ್ಲೂ ಪರಿಣಾಮ ಬೀರುವ ಸಾಧ್ಯತೆ ಇದೆ.








