ಬೆಂಗಳೂರು: ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸ್ವತಃ ತಾನೇ ರಿಯಲ್ ಎಸ್ಟೇಟ್ ವಹಿವಾಟು ನಡೆಸಲು ಹೊರಟಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್‌ನಲ್ಲಿ ನಿವೇಶನ ಮಾರಾಟ, ತೆರಿಗೆ ಮತ್ತಿತರ ಮೂಲಗಳಿಂದ 15 ವರ್ಷಗಳಲಿ 33,000 ಕೋಟಿ ಆದಾಯ ಬರುತ್ತದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲೂ ಇದನ್ನು ಒಪ್ಪಿದ್ದಾರೆ. ಸರ್ಕಾರ ರಿಯಲ್ ಎಸ್ಟೇಟ್ ದಲ್ಲಾಳಿಯ ಕೆಲಸ ಮಾಡುತ್ತಿದೆ ಎಂದರು.
ಯಾವುದೋ ಒಬ್ಬ ವ್ಯಕ್ತಿಯ ದಾಕ್ಷಿಣ್ಯಕ್ಕೆ ಬಲಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಯಲ್ ಎಸ್ಟೇಟ್ ದಲ್ಲಾಳಿ ಆಗಬಾರದು. ಆ ವ್ಯಕ್ತಿ ಹೇಳಿದಂತೆ ಕೇಳಿದರೆ ಇನ್ನೂ ಎರಡು ವರ್ಷ ಕುರ್ಚಿ ಉಳಿಯಬಹುದು ಎಂದು ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ತಮ್ಮ ಸಹಿಯನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅವರು ಅಧಿಕಾರದ ಕೊನೆಯಗಾಲದಲ್ಲಿ ಹೆಸರು ಕೆಡಿಸಿಕೊಳ್ಳದೆ ಹೋಗಿ ಎಂದು ಡಿಕೆಶಿ ಹೆಸರು ಹೇಳಿದೆ ವಾಗ್ದಾಳಿ ನಡೆಸಿದರು.
2006ರಲ್ಲಿ ನಾನು ಬೆಂಗಳೂರಿನ ಸುತ್ತ ಐದು ಟೌನ್‌ಶಿಪ್‌ಗಳನ್ನು ನಿರ್ಮಾಣ ಮಾಡಲು ಆದೇಶ ಹೊರಡಿಸಿದ್ದೆ. ಅದರ ವಿರುದ್ಧ ಕಾಂಗ್ರೆಸ್‌ನ ಎಚ್.ಕೆ.ಪಾಟೀಲರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಿ, ಒಂದು ವರದಿ ಸಿದ್ಧಪಡಿಸಿದ್ದರು. ಆಗ ಟೌನ್‌ಶಿಪ್ ವಿರೋಧಿಸಿದ್ದವರು ಈಗ ತಾವೇ ಬಿಡದಿ ಟೌನ್‌ಶಿಪ್ ನಿರ್ಮಿಸಲು ಹೊರಟಿದ್ದಾರೆ. ಕಾನೂನು ತಜ್ಞ ಎಚ್.ಕೆ.ಪಾಟೀಲರು ತಮ್ಮ ಸತ್ಯಶೋಧನಾ ಸಮಿತಿ ವರದಿಯನ್ನು ಜನರ ಮುಂದೆ ಇಡಲಿ ಎಂದು ಸವಾಲು ಹಾಕಿದರು.
ಬಿಡದಿ ರೈತರು, ರೈತರೇ ಅಲ್ಲ ಎಂದು ಉಪ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಜತೆಗೆ ಶೇ 80ರಷ್ಟು ರೈತರು ಒಪ್ಪಿಗೆ ನೀಡಿದ್ದಾರೆ ಎಂದೂ ಹೇಳುತ್ತಿದ್ದಾರೆ.
ರೈತರೇ ಇಲ್ಲ ಎಂದಾದಮೇಲೆ ಶೇ 80ರಷ್ಟು ರೈತರು ಒಪ್ಪಿಗೆ ನೀಡಿದ್ದು ಹೇಗೆ? ಅವರ ತಮ್ಮ ಬಮೂಲ್ ಅಧ್ಯಕ್ಷನಾಗಿದ್ದು, ಈ ಎಂಟು ಹಳ್ಳಿಗಳಲ್ಲಿ ಎಷ್ಟು ಹಾಲು ಉತ್ಪಾದನೆ ಆಗುತ್ತದೆ ಎಂಬುದನ್ನು ವರದಿ ತರಿಸಿಕೊಂಡು ನೋಡಲಿ. ಎಷ್ಟು ಮಂದಿ ರೈತರು ಇದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು.
ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ಸಾವಿರಾರು ಎಕರೆ ಭೂಮಿ ಕಬಳಿಕೆ ಆಗುತ್ತಿದೆ. ಅಲ್ಲದೆ, ಸಾಲು ಸಾಲು ಅಕ್ರಮಗಳು ನಡೆಯುತ್ತಿವೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಬಿಡದಿ ಟೌನ್‌ಶಿಪ್‌ಗೆ ಭೂಮಿ ಗುರುತಿಸುವ ವರದಿಯಲ್ಲಿ, ಎಂಟು ಹಳ್ಳಿಗಳ ವ್ಯಾಪ್ತಿಯಲ್ಲಿ ಒಟ್ಟು 2,320 ಎಕರೆ ಸರ್ಕಾರಿ ಜಮೀನು ಇದೆ ಎಂದು ಉಲ್ಲೇಖಿಸಲಾಗಿತ್ತು. ಈಗ ಅಧಿಸೂಚನೆಯಲ್ಲಿ 750 ಎಕರೆ ಸರ್ಕಾರಿ ಜಮೀನು ಇದೆ ಎಂದಷ್ಟೇ ಉಲ್ಲೇಖಿಸಿದೆ. ಉಳಿದ 1,570 ಎಕರೆ ಸರ್ಕಾರಿ ಜಮೀನು ಯಾರ ಹೆಸರಿಗೆ ಹೋಯಿತು? ಅಧಿಕಾರಿಗಳಿಗೆ ಎಷ್ಟು ಭೂಮಿ ಹೋಗಿದೆ ಮತ್ತು ಶಾಸಕರಿಗೆ ಎಷ್ಟು ಜಮೀನು ಹೋಗಿದೆ? ಅದೆಲ್ಲವನ್ನೂ ತಮ್ಮಗಳ ಹೆಸರಿಗೆ ಮಾಡಿಕೊಂಡು ಸರ್ಕಾರದಿಂದ ಪರಿಹಾರ ಪಡೆಯಲು ಹೊರಟಿದ್ದಾರೆ ಎಂದು ವಿವರಿಸಿದರು.
ಬಿಡದಿಯ ಈಗಲ್‌ಟನ್ ರೆಸಾರ್ಟ್ ಸುತ್ತಮುತ್ತಲಿನ ಗ್ರಾಮಗಳನ್ನೇ ಟೌನ್‌ಶಿಪ್‌ಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೆಸಾರ್ಟ್ ಒಟ್ಟು 77 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿತ್ತು. ಆ ಜಮೀನಿಗೆ ತಲಾ ಎಕರೆಗೆ 12 ಕೋಟಿಯಂತೆ ಸರ್ಕಾರಕ್ಕೆ 980 ಕೋಟಿ ಪಾವತಿ ಮಾಡಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. 10 ವರ್ಷಗಳ ಹಿಂದೆ ಎಕರೆಗೆ 12 ಕೋಟಿ ನಿಗದಿ ಮಾಡಿ, ಈಗ ಪಕ್ಕದ ಜಮೀನಿಗೆ ಎಕರೆಗೆ 2 ಕೋಟಿ ನಿಗದಿ ಮಾಡಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಎ ಖಾತಾ, ಇ ಖಾತಾ ಹೆಸರಿನಲ್ಲಿ ದುಡ್ಡು ಹೊಡೆಯಲು ಬೆಂಗಳೂರು ಅಭಿವೃದ್ಧಿ ಸಚಿವರು ಹೊರಟಿದ್ದಾರೆ. ಅವರು ಹೇಳುತ್ತಿರುವುದೆಲ್ಲಾ ಸುಳ್ಳು. ಜನರು ದುಡ್ಡು ಕಟ್ಟಬೇಡಿ. ಎರಡು ವರ್ಷದ ನಂತರ ನಮ್ಮ ಸರ್ಕಾರ ಬರುತ್ತದೆ. ಈ ಕೆಲಸವನ್ನು ಉಚಿತವಾಗಿಯೇ ಮಾಡಿಕೊಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.








