ಬೆಂಗಳೂರು: ಆಫ್ರಿಕಾ ದೇಶ ಉಗಾಂಡಾದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯಲ್ಲಿ ಎಬೋಲಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಮಹಿಳೆಯನ್ನು ತಕ್ಷಣವೇ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಿ ಕಟ್ಟುನಿಟ್ಟಿನ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಸೋಂಕು ದೃಢೀಕರಣಕ್ಕಾಗಿ ರಕ್ತದ ಮಾದರಿಗಳನ್ನು ಪುಣೆಯ ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಉಗಾಂಡಾದ ಕ್ಯಾಂಪಾಲಾ ನಿವಾಸಿ ನಗಿರೆ ಲತೀಫಾ ಮೇ 23ರಂದು ಬೆಂಗಳೂರಿಗೆ ಆಗಮಿಸಿ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.
ಎಬೋಲಾ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆ ಆರೋಗ್ಯ ಅಧಿಕಾರಿಗಳು ಅವರನ್ನು ಆಂಬ್ಯುಲೆನ್ಸ್ ಮೂಲಕ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಪ್ರತ್ಯೇಕ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಉಗಾಂಡಾ ಹಾಗೂ ಕಾಂಗೋ ಸೇರಿದಂತೆ ಎಬೋಲಾ ಅಪಾಯ ಇರುವ ದೇಶಗಳಿಂದ ಬರುವವರನ್ನು 21 ದಿನಗಳ ಕಾಲ ಆರೋಗ್ಯ ನಿಗಾದಲ್ಲಿಡಲಾಗುತ್ತದೆ.
ಮಹಿಳೆಯ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಪರೀಕ್ಷಾ ವರದಿ ಬುಧವಾರ ಲಭ್ಯವಾಗುವ ನಿರೀಕ್ಷೆಯಿದ್ದು, ವರದಿ ಬಂದ ಬಳಿಕ ಸೋಂಕು ದೃಢಪಟ್ಟಿದೆಯೇ ಎಂಬುದು ಸ್ಪಷ್ಟವಾಗಲಿದೆ.ಇದನ್ನು ಓದಿ –ಬೈಜೂಸ್ ಸಂಸ್ಥಾಪಕ ರವೀಂದ್ರನ್‌ಗೆ 6 ತಿಂಗಳ ಜೈಲು
ಇದೀಗ ಸೋಂಕು ಕೇವಲ ಶಂಕಿತ ಹಂತದಲ್ಲಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.








