ಬೆಂಗಳೂರು: ಸುರಕ್ಷತಾ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸಿಐ ಏಷ್ಯಾ-ಪೆಸಿಫಿಕ್ ಮತ್ತು ಮಧ್ಯಪ್ರಾಚ್ಯ ಸುರಕ್ಷತಾ ಮಾನ್ಯತಾ ಪ್ರಶಸ್ತಿ–2026ರ ‘ಡೈಮಂಡ್ ಅವಾರ್ಡ್’ ಲಭಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ನವೀನ ಹಾಗೂ ಪ್ರಾಯೋಗಿಕ ಪರಿಹಾರಗಳ ಮೂಲಕ ಸುರಕ್ಷತೆಯನ್ನು ಹೆಚ್ಚಿಸುವ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರನ್‌ವೇ ಸುರಕ್ಷತೆಗೆ ನೀಡಿದ ಆದ್ಯತೆ, ದತ್ತಾಂಶ ಆಧಾರಿತ ಕಾರ್ಯಾಚರಣೆ ಮಾದರಿ, ವಿವಿಧ ಪಾಲುದಾರರ ಸಹಯೋಗ ಹಾಗೂ ಸುಧಾರಿತ ಸುರಕ್ಷತಾ ವ್ಯವಸ್ಥೆಗಳ ಜಾರಿಗೆ ಈ ಗೌರವ ದೊರೆತಿದೆ.
ರನ್‌ವೇ ಸೇಫ್ಟಿ ಮೆಚ್ಯುರಿಟಿ ಮ್ಯಾಟ್ರಿಕ್ಸ್, ಪೈಲಟ್ ಜಾಗೃತಿ ಕಾರ್ಯಕ್ರಮಗಳು, ಫಾರಿನ್ ಆಬ್ಜೆಕ್ಟ್ ಡೆಬ್ರಿಸ್ ನಿರ್ವಹಣೆ ಹಾಗೂ ಏರ್‌ಸೈಡ್ ಸುರಕ್ಷತೆಯನ್ನು ಬಲಪಡಿಸುವ ಕ್ರಮಗಳು ಪ್ರಶಸ್ತಿಗೆ ಪ್ರಮುಖ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನಯಾನ ಸುರಕ್ಷತೆ ಮತ್ತು ಕಾರ್ಯಾಚರಣಾ ದಕ್ಷತೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಮಾದರಿ ಸಾಧನೆ ಮಾಡಿದ್ದು, ಈ ಪ್ರಶಸ್ತಿ ಅದರ ಕಾರ್ಯಕ್ಷಮತೆಗೆ ಮತ್ತೊಂದು ಮನ್ನಣೆ ಎಂದು ಎಸಿಐ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.








