ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಸರ್ವಧರ್ಮ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಸರ್ಕಾರವೇ ಅಧಿಕೃತ ಆಹ್ವಾನ ಪತ್ರಿಕೆಗಳನ್ನು ಕಳುಹಿಸಿದ್ದು, ಸುಮಾರು 55 ಸ್ವಾಮೀಜಿಗಳು, ಫಾದರ್‌ಗಳು ಹಾಗೂ ಮೌಲ್ವಿಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಆದಿಚುಂಚನಗಿರಿ, ಸುತ್ತೂರು, ಸಿದ್ಧಗಂಗಾ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠ, ಕಾಡಸಿದ್ಧೇಶ್ವರ ಮಠ, ತರಳಬಾಳು ಮಠ, ಪಂಚಮಸಾಲಿ ಪೀಠ, ರಂಭಾಪುರಿ ಪೀಠ, ಪೇಜಾವರ ಮಠ ಸೇರಿದಂತೆ ಹಲವು ಪ್ರಮುಖ ಮಠಗಳ ಶ್ರೀಗಳು ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ.
ಇದರ ಜೊತೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ, ಜೈನ, ಬೌದ್ಧ, ಕ್ರೈಸ್ತ ಹಾಗೂ ಮುಸ್ಲಿಂ ಧರ್ಮದ ಪ್ರಮುಖ ಮುಖಂಡರಿಗೂ ಆಹ್ವಾನ ನೀಡಲಾಗಿದೆ.ಇದನ್ನು ಓದಿ –₹5 ಸಾವಿರ ಲಂಚ; ಮಹಿಳಾ ಪಿಪಿ ಲೋಕಾಯುಕ್ತ ಬಲೆಗೆ
ಸರ್ವಧರ್ಮ ಸಾಮರಸ್ಯದ ಸಂದೇಶ ಸಾರುವ ಉದ್ದೇಶದಿಂದ ವಿವಿಧ ಸಮುದಾಯಗಳ ಧಾರ್ಮಿಕ ನಾಯಕರ ಸಮ್ಮುಖದಲ್ಲಿ ಪ್ರಮಾಣವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.








