- ಇತಿಹಾಸ ನಿರ್ಮಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್
ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ನಾರ್ವೆ ಚೆಸ್-2026 ಟೂರ್ನಿಯ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಪ್ರತಿಷ್ಠಿತ ನಾರ್ವೆ ಚೆಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಜಯ ಸಾಧಿಸಿದ 20 ವರ್ಷದ ಪ್ರಜ್ಞಾನಂದ, ಒಟ್ಟು 18 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಅವರ ಸಾಧನೆಯನ್ನು ಮೀರಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಟೂರ್ನಿಯ ಆರಂಭದಲ್ಲಿ ನಿಧಾನಗತಿಯಲ್ಲಿ ಮುನ್ನಡೆ ಸಾಧಿಸಿದ್ದ ಪ್ರಜ್ಞಾನಂದ, ದ್ವಿತೀಯಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ವಿಶ್ವ ನಂ.1 ಆಟಗಾರ ಹಾಗೂ ಏಳು ಬಾರಿ ನಾರ್ವೆ ಚೆಸ್ ಚಾಂಪಿಯನ್ ಆಗಿರುವ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಸೋಲಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.
ಅಂತಿಮ ಸುತ್ತಿನಲ್ಲಿ ಅಮೆರಿಕದ ವೆಸ್ಲಿ ಸೊ ಮತ್ತು ಫ್ರಾನ್ಸ್‌ನ ಅಲಿರೇಝಾ ಫೀರೋಝ್‌ಜಾ ನಡುವಿನ ಪಂದ್ಯ ಟೈಬ್ರೇಕರ್‌ಗೆ ತಲುಪಿದ್ದು, ಅದರ ಲಾಭವನ್ನು ಪ್ರಜ್ಞಾನಂದ ಪಡೆದುಕೊಂಡರು. ಕೀಮರ್ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ವೆಸ್ಲಿ ಸೊ 17 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಅಲಿರೇಝಾ ಫೀರೋಝ್‌ಜಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಹಾಲಿ ಚಾಂಪಿಯನ್ ಡಿ. ಗುಕೇಶ್ ಪ್ರಶಸ್ತಿ ಪೈಪೋಟಿಯಿಂದ ಹೊರಬಿದ್ದಿದ್ದು, ಪ್ರಜ್ಞಾನಂದ ಭಾರತದ ಕೀರ್ತಿಪತಾಕೆಯನ್ನು ವಿಶ್ವ ವೇದಿಕೆಯಲ್ಲಿ ಮತ್ತೊಮ್ಮೆ ಹಾರಿಸಿದ್ದಾರೆ.








