ತಿರುವನಂತಪುರಂ: ಕೇರಳದ ವಯನಾಡು ಜಿಲ್ಲೆಯಲ್ಲಿ ನಿರಂತರ ಧಾರಾಕಾರ ಮಳೆಯಿಂದ ಭೂಕುಸಿತ ಸಂಭವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 30 ಮಂದಿ ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
ವಯನಾಡಿನ ಮೆಪ್ಪಾಡಿ ಸಮೀಪ ಸುರಂಗ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಪ್ರದೇಶದ ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಸಂಭವಿಸಿದೆ. ಮಣ್ಣು ಹಾಗೂ ಬಂಡೆಗಳು ಏಕಾಏಕಿ ಕುಸಿದ ಪರಿಣಾಮ ಅಲ್ಲಿದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡರು. ಘಟನಾ ಸ್ಥಳದಲ್ಲಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಸಿಲುಕಿರುವವರನ್ನು ಹೊರತೆಗೆದುಕೊಳ್ಳುವ ಪ್ರಯತ್ನ ಮುಂದುವರಿದಿದೆ.
ದುರಂತದಲ್ಲಿ ಗಾಯಗೊಂಡಿದ್ದ ಆರು ಮಂದಿಯನ್ನು ಸ್ಥಳೀಯರು ರಕ್ಷಿಸಿ ಮೆಪ್ಪಾಡಿಯ ಡಾ. ಮೂಪೆನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಚಿವರಿಗೆ ಸಿಎಂ ಸೂಚನೆ
ಘಟನೆಯ ಮಾಹಿತಿ ತಿಳಿದ ಕೂಡಲೇ ಕೇರಳ ಮುಖ್ಯಮಂತ್ರಿ ಸಂಬಂಧಿತ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಅಗತ್ಯ ನೆರವು ಒದಗಿಸಲು ಸರ್ಕಾರ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.
ಭಾರೀ ಮಳೆಯಿಂದ ಸಂಚಾರ ವ್ಯತ್ಯಯ
ಕಳೆದ 24 ಗಂಟೆಗಳಲ್ಲಿ ವಯನಾಡು ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೂರಲ್ಮಲ ಭಾಗದ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಸುರಂಗ ನಿರ್ಮಾಣ ಕಾಮಗಾರಿಯನ್ನೂ ಈಗಾಗಲೇ ಸ್ಥಗಿತಗೊಳಿಸಲಾಗಿತ್ತು.ರಾಜ್ಯಾದ್ಯಂತ ಭಾರೀ ಮಳೆ: 2 ಜಿಲ್ಲೆಗಳಿಗೆ ರೆಡ್ ಅಲರ್ಟ್
ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವ ವರದಿಯೂ ಲಭ್ಯವಾಗಿದೆ. ರಕ್ಷಣಾ ತಂಡಗಳು ಅವಶೇಷ ತೆರವುಗೊಳಿಸುವ ಕಾರ್ಯವನ್ನು ಮುಂದುವರಿಸಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿವೆ.








