ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ. ಕೆಆರ್‌ಎಸ್ (ಕೃಷ್ಣರಾಜ ಸಾಗರ) ಜಲಾಶಯದ ನೀರಿನ ಮಟ್ಟ 105 ಅಡಿಗೆ ಏರಿಕೆಯಾಗಿದ್ದು, ಮುಂಗಾರು ಬೆಳೆಗಾಗಿ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ರೈತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 81 ಅಡಿಗೆ ಇಳಿದಿದ್ದಾಗ, ಕುಡಿಯುವ ನೀರಿನ ಕೊರತೆಯನ್ನು ಮನಗಂಡ ಸರ್ಕಾರ ಹೊಸ ಬೆಳೆ ಬಿತ್ತನೆ ಮಾಡದಂತೆ ರೈತರಿಗೆ ಸೂಚನೆ ನೀಡಿತ್ತು. ಆದರೆ ಈಗ ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ ವೇಗವಾಗಿ ಏರಿಕೆಯಾಗಿದೆ.
- ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ. ಕೆಆರ್‌ಎಸ್ (ಕೃಷ್ಣರಾಜ ಸಾಗರ) ಜಲಾಶಯದ ನೀರಿನ ಮಟ್ಟ 105 ಅಡಿಗೆ ಏರಿಕೆಯಾಗಿದ್ದು, ಮುಂಗಾರು ಬೆಳೆಗಾಗಿ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ರೈತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
- ತುಂಗಭದ್ರಾ ಜಲಾಶಯಕ್ಕೂ ಹೆಚ್ಚಿದ ಒಳಹರಿವು
ನೀರಿನ ಮಟ್ಟ 105 ಅಡಿಗೆ ತಲುಪಿರುವುದರಿಂದ ಮಂಡ್ಯ ಜಿಲ್ಲೆಯ ರೈತರು ಕೃಷಿ ಚಟುವಟಿಕೆ ಆರಂಭಿಸಲು ಸಜ್ಜಾಗಿದ್ದಾರೆ. ಬಿತ್ತನೆಗೆ ಈಗ ಸೂಕ್ತ ಸಮಯವಾಗಿರುವುದರಿಂದ ಸರ್ಕಾರ ತಕ್ಷಣ ನಾಲೆಗಳಿಗೆ ನೀರು ಹರಿಸುವ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ತಡವಾದರೆ ಮುಂಗಾರು ಬೆಳೆ ಹಾನಿಯಾಗುವ ಆತಂಕವೂ ವ್ಯಕ್ತವಾಗಿದೆ.
ತುಂಗಭದ್ರಾ ಜಲಾಶಯಕ್ಕೂ ಹೆಚ್ಚಿದ ಒಳಹರಿವು
ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ತುಂಗಭದ್ರಾ ಜಲಾಶಯಕ್ಕೂ ಭಾರಿ ಪ್ರಮಾಣದ ಒಳಹರಿವು ದಾಖಲಾಗುತ್ತಿದೆ. ಮೂರು ರಾಜ್ಯಗಳ ಒಂಬತ್ತು ಜಿಲ್ಲೆಗಳ ಜೀವನಾಡಿಯಾಗಿರುವ ಈ ಜಲಾಶಯದಲ್ಲಿ ಕಳೆದ ಕೆಲವು ವಾರಗಳವರೆಗೆ ನೀರಿನ ಕೊರತೆ ಉಂಟಾಗಿತ್ತು. ಆದರೆ ಕಳೆದ ಒಂದು ವಾರದಿಂದ ಪರಿಸ್ಥಿತಿ ಬದಲಾಗಿದ್ದು, ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿದೆ.
105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 51.145 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 91 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೇವಲ ಒಂದೇ ದಿನದಲ್ಲಿ ಸುಮಾರು 7 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಿಂದ ನೀರಿನ ಸಂಗ್ರಹ 44 ಟಿಎಂಸಿಯಿಂದ 51 ಟಿಎಂಸಿಗೆ ಏರಿಕೆಯಾಗಿದೆ.ಇದನ್ನು ಓದಿ –7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಭಾರಿ ಮಳೆ ಸಾಧ್ಯತೆ
ಈ ಬೆಳವಣಿಗೆಯಿಂದ ನೀರಿನ ಕೊರತೆಯ ಆತಂಕದಲ್ಲಿದ್ದ ರೈತರಿಗೆ ಹೊಸ ಭರವಸೆ ಮೂಡಿದ್ದು, ಮುಂಬರುವ ದಿನಗಳಲ್ಲಿ ಮಳೆ ಇದೇ ರೀತಿ ಮುಂದುವರಿದರೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆ ವ್ಯಕ್ತವಾಗಿದೆ.








