ಬೆಂಗಳೂರು: ಬಹುಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಹಗರಣ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಜೂನ್ 1ರಂದು ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಬಿಟ್‌ಕಾಯಿನ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆಗಿನ ಸಂಪರ್ಕ ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ಇಡಿ, ನಲಪಾಡ್ ಅವರ ಪಾತ್ರದ ಬಗ್ಗೆ ತನಿಖೆ ಮುಂದುವರಿಸಿದೆ. ಶ್ರೀಕಿಗೆ ಹೋಟೆಲ್ ಕೊಠಡಿಗಳ ವ್ಯವಸ್ಥೆ ಸೇರಿದಂತೆ ಹಲವು ನೆರವು ನೀಡಿದ್ದಾರೆಯೆಂಬ ಆರೋಪಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಹಿಂದೆ ನೋಟಿಸ್ ನೀಡಿದಾಗ ರಾಜಕೀಯ ಕಾರ್ಯಕ್ರಮಗಳ ಕಾರಣ ನೀಡಿ ನಲಪಾಡ್ ವಿಚಾರಣೆಗೆ ಗೈರಾಗಿದ್ದರು. ಇದೀಗ ಎರಡನೇ ಬಾರಿ ಸಮನ್ಸ್ ನೀಡಲಾಗಿದ್ದು, ತನಿಖೆಗೆ ಸಹಕರಿಸುವಂತೆ ಸೂಚಿಸಲಾಗಿದೆ.
ಈ ಪ್ರಕರಣದಲ್ಲಿ ನಲಪಾಡ್, ರಹೀಮ್ ಖಾನ್ ಸೇರಿದಂತೆ ಕೆಲವರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ಈ ಹಿಂದೆ ದಾಳಿ ನಡೆಸಿ ದಾಖಲೆಗಳು ಹಾಗೂ ಡಿಜಿಟಲ್ ಮಾಹಿತಿಗಳನ್ನು ಪರಿಶೀಲಿಸಿದ್ದರು.ಇದನ್ನು ಓದಿ –ರಾಜ್ಯದಲ್ಲಿ ಮಳೆಯ ಅಬ್ಬರ; 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬಿಟ್‌ಕಾಯಿನ್ ಹಗರಣವು ವಿವಿಧ ಆನ್‌ಲೈನ್ ವೇದಿಕೆಗಳು ಮತ್ತು ಕ್ರಿಪ್ಟೋಕರೆನ್ಸಿ ವ್ಯವಹಾರಗಳಿಗೆ ಸಂಬಂಧಿಸಿದ ತನಿಖೆಯಾಗಿದ್ದು, ಈ ಸಂಬಂಧ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇಡಿ ಅಧಿಕಾರಿಗಳು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.








