ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು.
ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಗೌಪ್ಯತೆ ಮತ್ತು ಹುದ್ದೆಯ ಪ್ರಮಾಣವಚನ ಬೋಧಿಸಿದರು. ಈ ಮೂಲಕ ರಾಜ್ಯದ ಆಡಳಿತದ ಚುಕ್ಕಾಣಿ ಅಧಿಕೃತವಾಗಿ ಡಿಕೆ ಶಿವಕುಮಾರ್ ಅವರ ಕೈ ಸೇರಿತು.
ಪಕ್ಷ ಸಂಘಟನೆ ಹಾಗೂ ಜನಪರ ಹೋರಾಟಗಳ ಮೂಲಕ ರಾಜಕೀಯವಾಗಿ ಬೆಳೆದಿರುವ ಡಿಕೆ ಶಿವಕುಮಾರ್, ಹಲವು ದಶಕಗಳ ರಾಜಕೀಯ ಅನುಭವದೊಂದಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ.
ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು, ವಿವಿಧ ಗಣ್ಯರು, ಶಾಸಕರು, ಧಾರ್ಮಿಕ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿ ಶುಭ ಕೋರಿದರು.
ಹೊಸ ಸರ್ಕಾರದ ಮೊದಲ ಹಂತದ ಸಚಿವ ಸಂಪುಟ ರಚನೆಗೂ ಚಾಲನೆ ದೊರೆತಿದ್ದು, ಶೀಘ್ರದಲ್ಲೇ ವಿವಿಧ ಇಲಾಖೆಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ.








