ಬೆಂಗಳೂರು: ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪಿನೊಂದಿಗೆ ಅವರ ಶಾಸಕ ಸ್ಥಾನ ತಕ್ಷಣದಿಂದಲೇ ರದ್ದಾಗಿದೆ.
ಬುಧವಾರವೇ ಈ ಪ್ರಕರಣದಲ್ಲಿ ಶಾಸಕರು ಸೇರಿದಂತೆ 16 ಮಂದಿಯನ್ನು ದೋಷಿಗಳೆಂದು ಘೋಷಿಸಿದ್ದ ನ್ಯಾಯಾಲಯ, ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಶಿಕ್ಷೆ ವಿಧಿಸಿದ ಹಿನ್ನೆಲೆ ಜನಪ್ರತಿನಿಧಿಗಳ ಕಾಯ್ದೆ ಅನ್ವಯ ವಿನಯ್ ಕುಲಕರ್ಣಿ ಅವರು ತಕ್ಷಣದಿಂದಲೇ ಅನರ್ಹರಾಗಿದ್ದಾರೆ.
ಜನಪ್ರತಿನಿಧಿ ಕಾಯ್ದೆ, 1951 ಪ್ರಕಾರ, ಯಾವುದೇ ಶಾಸಕ ಅಥವಾ ಸಂಸದರು ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಲ್ಪಟ್ಟರೆ, ಅವರು ತಕ್ಷಣವೇ ತಮ್ಮ ಸ್ಥಾನ ಕಳೆದುಕೊಳ್ಳುತ್ತಾರೆ. ಕೊಲೆ ಪ್ರಕರಣಗಳಲ್ಲಿ ಶಿಕ್ಷೆಯ ಅವಧಿ ಜೀವಾವಧಿ ಅಥವಾ ಮರಣದಂಡನೆ ಇರುವುದರಿಂದ, ಇಂತಹ ಪ್ರಕರಣಗಳಲ್ಲಿ ಅನರ್ಹತೆ ತಕ್ಷಣ ಜಾರಿಯಾಗುತ್ತದೆ.
ಇದೇ ಜೊತೆಗೆ, ಅವರು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರವೂ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ.
ಸುಪ್ರೀಂ ಕೋರ್ಟ್‌ನ 2013ರ ಲಿಲಿ ಥಾಮಸ್ ತೀರ್ಪಿನ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಹಿಂದಿನಂತೆ 3 ತಿಂಗಳ ರಕ್ಷಣೆ ಇರುವುದಿಲ್ಲ. ಅಪರಾಧ ಸಾಬೀತಾದ ತಕ್ಷಣವೇ ಅನರ್ಹತೆ ಜಾರಿಯಾಗುತ್ತದೆ.ಇದನ್ನು ಓದಿ –ಚಾರಣಿಗರಿಗೆ ಕಡ್ಡಾಯ ಟ್ರ್ಯಾಕಿಂಗ್ ಆಪ್: ಗೈಡ್ ಇಲ್ಲದೆ ಅರಣ್ಯ ಪ್ರವೇಶಕ್ಕೆ ನಿಷೇಧ
ಇನ್ನು ಮುಂದೆ, ವಿನಯ್ ಕುಲಕರ್ಣಿ ಅವರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಆದರೆ, ಮೇಲಿನ ನ್ಯಾಯಾಲಯವು ಅವರ ಅಪರಾಧ ತೀರ್ಪಿನ ಮೇಲೆಯೇ ತಡೆಯಾಜ್ಞೆ ನೀಡಿದರೆ ಮಾತ್ರ ಶಾಸಕ ಸ್ಥಾನವನ್ನು ಮರಳಿ ಪಡೆಯಲು ಸಾಧ್ಯ. ಕೇವಲ ಜಾಮೀನು ದೊರಕುವುದರಿಂದ ಸ್ಥಾನ ಪುನಃಸ್ಥಾಪನೆ ಆಗುವುದಿಲ್ಲ.








