ಬೆಂಗಳೂರು: ಕೇರಳಕ್ಕೆ ನೈಋತ್ಯ ಮುಂಗಾರು ಪ್ರವೇಶಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ಇನ್ನೆರಡು ದಿನಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮುಂಗಾರು ಅಧಿಕೃತ ಪ್ರವೇಶದ ಕುರಿತು ಗುರುವಾರ ಪರಿಸ್ಥಿತಿ ಪರಿಶೀಲಿಸಿ ಘೋಷಣೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ. ಈ ನಡುವೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಮುಂದಿನ ಐದು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಈ ಭಾಗಗಳಲ್ಲಿ ಗುಡುಗು, ಮಿಂಚು, ಬಿರುಗಾಳಿ ಹಾಗೂ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.ಇದನ್ನು ಓದಿ –56 ಸಾವಿರ ಹುದ್ದೆಗಳ ಭರ್ತಿಗೆ ಶೀಘ್ರ ವೇಳಾಪಟ್ಟಿ: ಸಿಎಂ ಡಿಕೆಶಿ
ಹವಾಮಾನ ತಜ್ಞರ ಪ್ರಕಾರ, ನೈಋತ್ಯ ಮುಂಗಾರು ಅರಬ್ಬಿ ಸಮುದ್ರ, ಲಕ್ಷದ್ವೀಪ, ಕೇರಳ, ತಮಿಳುನಾಡು ಹಾಗೂ ಬಂಗಾಳ ಕೊಲ್ಲಿಯ ಹಲವು ಭಾಗಗಳತ್ತ ವೇಗವಾಗಿ ಮುಂದುವರಿಯುತ್ತಿದ್ದು, ಕರ್ನಾಟಕದಲ್ಲೂ ಮಳೆ ಚಟುವಟಿಕೆಗಳು ತೀವ್ರಗೊಳ್ಳಲಿವೆ.








