ಬೆಂಗಳೂರು: ಮುಂದಿನ ಆರು ತಿಂಗಳ ಕಾಲ ತಿರುಪತಿ ತಿರುಮಲ ದೇವಾಲಯಕ್ಕೆ ಬಮುಲ್ ವತಿಯಿಂದ ಪ್ರತಿ ತಿಂಗಳು 2 ಲಕ್ಷ ಕೆಜಿ ನಂದಿನಿ ತುಪ್ಪ ಸರಬರಾಜು ಮಾಡಲಾಗುತ್ತದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಕಚೇರಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಿರುಪತಿಗೆ ತುಪ್ಪ ಸಾಗಣೆ ಮಾಡುವ ವಾಹನಕ್ಕೆ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು.
ತಿರುಪತಿಗೆ ನಂದಿನಿ ತುಪ್ಪ ಪೂರೈಕೆಗೆ ಬಮುಲ್ ಟೆಂಡರ್ ಪಡೆದಿದ್ದು, ಇದರ ಒಟ್ಟು ಮೊತ್ತ ₹136 ಕೋಟಿ ಎಂದು ಹೇಳಿದರು.
ಪ್ರತಿದಿನ 12.5 ಟನ್ ಪ್ರಮಾಣದಲ್ಲಿ ಮುಂದಿನ ಆರು ತಿಂಗಳು ತುಪ್ಪ ಸರಬರಾಜು ಮಾಡಲಾಗುತ್ತದೆ. ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯೊಂದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡು ಈ ಪೂರೈಕೆ ನಡೆಯುತ್ತಿದೆ ಎಂದು ತಿಳಿಸಿದರು.
ಗುಣಮಟ್ಟ ಮತ್ತು ರುಚಿಯಲ್ಲಿ ನಂದಿನಿ ತುಪ್ಪ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದು, ಇದೇ ಕಾರಣಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಹೇಳಿದರು.ಇದನ್ನು ಓದಿ –ಇಂದಿನಿಂದ ನಾಲ್ಕು ದಿನ ರಾಜ್ಯದಲ್ಲಿ ಮಳೆ
ಸಾಗಾಣಿಕೆಗೆ ಡಿಜಿಟಲ್ ಲಾಕ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ನೀಡಿದ ಪಾಸ್‌ವರ್ಡ್ ನಮೂದಿಸಿದರೆ ಮಾತ್ರ ವಾಹನದ ಲಾಕ್ ತೆರೆಯುವ ವ್ಯವಸ್ಥೆ ಇದೆ. ಗ್ರಾಹಕರಿಗೂ ಇದೇ ರೀತಿಯ ಗುಣಮಟ್ಟದ ಉತ್ಪನ್ನಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.








