- ಯುವಕರು ದೇಶದ ಅತಿದೊಡ್ಡ ಶಕ್ತಿ: ಪ್ರಧಾನಿ ಮೋದಿ ಅಭಿಪ್ರಾಯ
ಮೈಸೂರು: ಸ್ವಾಮಿ ವಿವೇಕಾನಂದರು ಕಂಡ ಭಾರತದ ಕನಸನ್ನು ಸಾಕಾರಗೊಳಿಸುವ ಹೊಣೆ ಇಂದಿನ ಯುವಜನರ ಮೇಲಿದೆ. ಯುವಜನರು ದೇಶದ ಅತಿದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದಿಂದ ನಿರ್ಮಿಸಿರುವ ವಿವೇಕ ಸ್ಮಾರಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ, ಪ್ರಥಮವಾಗಿ ಚಾಮುಂಡೇಶ್ವರಿ ದೇವಿಗೆ ಪ್ರಣಾಮ ಸಲ್ಲಿಸುತ್ತೇನೆ ಎಂದರು.
ಉತ್ಪಾದನೆ, ತಂತ್ರಜ್ಞಾನ, ಸ್ಟಾರ್ಟ್ಅಪ್, ಅಂತರಿಕ್ಷ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಯುವಕರ ಸಾಧನೆಯೇ ಭಾರತವನ್ನು ವಿಶ್ವದ ಮುಂಚೂಣಿಗೆ ತರುತ್ತಿದೆ ಎಂದು ಮೋದಿ ಶ್ಲಾಘಿಸಿದರು.
ಸ್ವಾಮಿ ವಿವೇಕಾನಂದರು ವಿಶ್ವಪರ್ಯಟನೆ ವೇಳೆ ವಿದೇಶಗಳ ಯುವಕರು ತಮ್ಮ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಕಂಡಿದ್ದರು. ಅಂದು ಭಾರತ ಗುಲಾಮಗಿರಿಯಲ್ಲಿತ್ತು. ಆದರೆ ಇಂದು ಭಾರತದ ಯುವಕರು ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು. ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಾತನಾಡಿದರು.
ಮೈಸೂರಿನ ಪರಂಪರೆಗೆ ದೇಶದಲ್ಲಿ ವಿಶೇಷ ಸ್ಥಾನ
ಮೈಸೂರು ಭಾರತದ ಅನಾದಿ ಸಾಂಸ್ಕೃತಿಕ ಕೇಂದ್ರವಾಗಿದೆ. ದಸರಾ, ಅರಮನೆ, ಸಂಗೀತ, ಸಾಹಿತ್ಯ, ಧಾರ್ಮಿಕ ಪರಂಪರೆ ದೇಶದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಸ್ವಾಮಿ ವಿವೇಕಾನಂದರ ಜೀವನದಲ್ಲೂ ಮೈಸೂರಿನ ಕೊಡುಗೆ ಮಹತ್ವದ್ದಾಗಿದೆ. ಯುವ ಸನ್ಯಾಸಿಯಾಗಿದ್ದಾಗ ಅವರಿಗೆ ಈ ನೆಲವೇ ದೊಡ್ಡ ಪ್ರೇರಣೆಯಾಯಿತು ಎಂದು ನರೇಂದ್ರ ಮೋದಿ ಹೇಳಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಯುವಶಕ್ತಿ, ಯುವ ಚಿಂತನೆ ಮತ್ತು ಯುವ ಆಲೋಚನೆಗಳೇ ಸ್ವಾಮಿ ವಿವೇಕಾನಂದರ ಸಂದೇಶ. ನಮ್ಮ ಸರ್ಕಾರವೂ ಇದೇ ಚಿಂತನೆಯೊAದಿಗೆ ಕೆಲಸ ಮಾಡುತ್ತಿದೆ. ‘ಯುವ ಯುಗ ನವ ಯುಗ’ ನಮ್ಮ ಸರ್ಕಾರದ ಘೋಷಣೆಯಾಗಿದೆ ಎಂದರು. ಕಾರ್ಯಕ್ರಮದ ಬಳಿಕ ನಿರ್ಗಮಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭುಜ ತಟ್ಟಿ, ಕೈಹಿಡಿದು ಕೆಲ ಹೊತ್ತು ಮಾತನಾಡಿ ಜೊತೆಯಾಗಿ ಕರೆದೊಯ್ದರು.








