ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರವಾಗಿ ರಾಜ್ಯದಲ್ಲಿ ಚರ್ಚೆ ತೀವ್ರಗೊಂಡಿರುವ ನಡುವೆಯೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ತಮಿಳುನಾಡಿಗೆ ಪ್ರತ್ಯೇಕವಾಗಿ ನೀರು ಹರಿಸಿಲ್ಲ ಎಂದು ಹೇಳಿರುವ ಅವರು, ಜಲಾಶಯಗಳು ಭರ್ತಿಯಾಗುತ್ತಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ನೀರನ್ನು ಹೊರಬಿಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಡ್ಯಾಂ ತನ್ನ ಪೂರ್ಣ ಸಾಮರ್ಥ್ಯ ತಲುಪಿದ ಬಳಿಕ ಹೆಚ್ಚುವರಿ ನೀರನ್ನು ತಡೆದುಿಡಲು ಸಾಧ್ಯವಿಲ್ಲ. ಜಲಾಶಯದ ಸುರಕ್ಷತೆಗಾಗಿ ಹೆಚ್ಚುವರಿ ನೀರನ್ನು ಹೊರಹರಿಸುವುದು ಕಡ್ಡಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡು ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದು, ಪ್ರಸ್ತುತ ಕಾವೇರಿ ನದಿಯಲ್ಲಿ 36ರಿಂದ 39 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ತಮಿಳುನಾಡು 3,600 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಬೇಡಿಕೆ ಸಲ್ಲಿಸಿದೆ. ಈ ಕುರಿತು ವಿರೋಧ ಪಕ್ಷದ ನಾಯಕರು ಹಾಗೂ ಕಾನೂನು ತಜ್ಞರೊಂದಿಗೆ ಚರ್ಚಿಸಿ ನಾಳೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.ಇದನ್ನು ಓದಿ –ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ ಇಳಿಕೆ
ಇದೇ ವೇಳೆ, ಜಲಾಶಯಗಳಿಂದ ನೀರು ಹೊರಬಿಡುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಅವರು, ಯಾರೂ ಡ್ಯಾಂಗಳ ಬಳಿ ಅಥವಾ ನದಿಗೆ ಇಳಿಯಬಾರದು ಎಂದು ಮನವಿ ಮಾಡಿದ್ದಾರೆ. ನೀರಿನ ಹರಿವು ತೀವ್ರವಾಗಿರುವುದರಿಂದ ಜೀವಾಪಾಯ ಸಂಭವಿಸುವ ಸಾಧ್ಯತೆ ಇದೆ. ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿದ್ದು, ಯಾವುದೇ ರೀತಿಯ ಅಪಾಯಕಾರಿ ಸಾಹಸಕ್ಕೆ ಮುಂದಾಗಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.








