ಬೆಂಗಳೂರು, ಜೂನ್ 16: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಹಲವೆಡೆ ಎಚ್ಚರಿಕೆ ಜಾರಿ ಮಾಡಲಾಗಿದೆ. ಹವಾಮಾನ ಇಲಾಖೆ ಜೂನ್ 19ರ ತನಕ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಹೊಸನಗರ ತಹಶೀಲ್ದಾರರು ಪ್ರಾಥಮಿಕದಿಂದ ಕಾಲೇಜು ಮಟ್ಟದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಆದರೆ ಉಳಿದ ತಾಲ್ಲೂಕುಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಎಂದಿನಂತೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಮಳೆ ಅಬ್ಬರ ಹೆಚ್ಚಾಗಿರುವ ಪ್ರದೇಶಗಳು:
- ಬೆಂಗಳೂರು, ಮಂಗಳೂರು, ಕೊಟ್ಟಿಗೆಹಾರ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ, ಭಾಗಮಂಡಲ
- ಧರ್ಮಸ್ಥಳ, ಅಂಕೋಲಾ, ಸುಳ್ಯ, ಉಡುಪಿ, ಕಾರ್ಕಳ, ಪುತ್ತೂರು, ಲೋಂಡಾ, ಆಗುಂಬೆ
ಅಲರ್ಟ್ಗಳು:
- ರೆಡ್ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ
- ಆರೆಂಜ್ ಅಲರ್ಟ್: ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು
- ಯೆಲ್ಲೋ ಅಲರ್ಟ್: ವಿಜಯನಗರ, ತುಮಕೂರು, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ
ಇದನ್ನು ಓದಿ –ಇರಾನ್–ಇಸ್ರೇಲ್ ದಾಳಿ ತೀವ್ರ – ನೂರಾರು ಜನ ಬಲಿ
ಹವಾಮಾನ ಇಲಾಖೆ ಪ್ರಕಾರ, ಮುಂದಿನ 7 ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಜೋರಾದ ಗಾಳಿಯೊಂದಿಗೆ ಮಳೆಯಾಗುವ ಮುನ್ಸೂಚನೆಯಿದೆ. ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆವಿದೆ. ಗುಡುಗು-ಮಿಂಚು ಸಹಿತ ಮಳೆಯಾಗುವ ಸಂಭವವೂ ಇರುವುದರಿಂದ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವುದು ಸೂಕ್ತ.