ಗಾಂಧೀನಗರ: ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್‌ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದು,ಈ ಹಿನ್ನೆಲೆಯಲ್ಲಿ ಅವರು ಶನಿವಾರ ಗುಜರಾತ್‌ಗೆ ಆಗಮಿಸಿ, ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಭಾವನಗರದ ಜವಾಹರ್ ಮೈದಾನದಲ್ಲಿ ನಡೆಯುವ ‘ಸಮುದ್ರದಿಂದ ಸಮೃದ್ಧಿ’ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದು, ₹34,200 ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಿ ಮೋದಿ ಈಗಾಗಲೇ ₹7,870 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವಾರು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ಯೋಜನೆಗಳಲ್ಲಿ ಭಾರತದ ಪ್ರಮುಖ ಬಂದರುಗಳಲ್ಲಿ ಮೂಲಸೌಕರ್ಯ ನವೀಕರಣ ಪ್ರಮುಖವಾಗಿದೆ.
ಮುಂಬೈನ ಇಂದಿರಾ ಡಾಕ್‌ನಲ್ಲಿ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉದ್ಘಾಟನೆ, ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಹೊಸ ಕಂಟೇನರ್ ಟರ್ಮಿನಲ್‌ಗೆ ಅಡಿಪಾಯ ಹಾಕುವುದು ಪ್ರಮುಖ ಘಟ್ಟಗಳಾಗಿವೆ.
ಇದಲ್ಲದೆ, ಒಡಿಶಾದ ಪಾರಾದೀಪ್ ಬಂದರಿನಲ್ಲಿ ಹೊಸ ಸರಕು ನಿಲ್ದಾಣ ಮತ್ತು ಕಂಟೇನರ್ ಸೌಲಭ್ಯಗಳು, ಗುಜರಾತ್‌ನ ಟ್ಯೂನ ಟೆಕ್ರಾ ಮಲ್ಟಿ-ಕಾರ್ಗೋ ಟರ್ಮಿನಲ್, ತಮಿಳುನಾಡಿನ ಎನ್ನೋರ್‌ನ ಕಾಮರಾಜರ್ ಬಂದರು ಮತ್ತು ಚೆನ್ನೈ ಬಂದರಿನ ನವೀಕರಣ ಯೋಜನೆಗಳು, ಕಾರ್ ನಿಕೋಬಾರ್ ದ್ವೀಪ, ದೀನದಯಾಳ್ (ಕಾಂಡ್ಲಾ) ಬಂದರು, ಜೊತೆಗೆ ಪಾಟ್ನಾ ಮತ್ತು ವಾರಣಾಸಿಯ ಒಳನಾಡಿನ ಜಲಮಾರ್ಗ ಸೌಲಭ್ಯಗಳ ಅಭಿವೃದ್ಧಿ ಕೂಡ ಸೇರಿದೆ.








