ಮಂಡ್ಯ: ವೇಗವಾಗಿ ಬಂದ ಬೈಕ್ ಸ್ಕೈವಾಕ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದಾರುಣ ಘಟನೆ ಮಂಡ್ಯದ ಮಹಿಳಾ ಕಾಲೇಜು ಬಳಿ ನಡೆದಿದೆ.
ಇತ್ತೀಚೆಗೆ ಮಹಿಳಾ ಕಾಲೇಜು ಸಮೀಪ ಹೊಸದಾಗಿ ಸ್ಕೈವಾಕ್ ನಿರ್ಮಾಣ ಮಾಡಲಾಗಿತ್ತು. ರಾತ್ರಿ ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ನೇರವಾಗಿ ಸ್ಕೈವಾಕ್ ಕಂಬಕ್ಕೆ ಅಪ್ಪಳಿಸಿತು. ಡಿಕ್ಕಿಯ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರು ಯುವಕರ ದೇಹಗಳು ಛಿದ್ರ ಛಿದ್ರವಾಗಿ ಚದುರಿದವು.
ಈ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಮೃತರನ್ನು ಡ್ಯಾನಿಲ್ (20) ಹಾಗೂ ಜೋಶ್ (20) ಎಂದು ಗುರುತಿಸಲಾಗಿದೆ. ಇವರು ಮಂಡ್ಯದ ಉದಯಗಿರಿ ಹಾಗೂ ಯತ್ತಗದಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸುವ ಮುನ್ನ ಇಬ್ಬರೂ ಬೆಂಗಳೂರಿನಿಂದ ಮಂಡ್ಯಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಮಂಡ್ಯ ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆಕಸ್ಮಿಕ ದುರಂತದಿಂದ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.








